ADVERTISEMENT

‘ಟಿಎಲ್‌ಬಿಸಿ ಹಂಗಾಮಿ ನೌಕರರಿಗೆ ಬಾಕಿ ಪಾವತಿಸದಿದ್ದರೆ ಹೋರಾಟ’

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 13:37 IST
Last Updated 17 ಫೆಬ್ರುವರಿ 2020, 13:37 IST

ರಾಯಚೂರು: ತುಂಗಭದ್ರ ಎಡದಂಡೆ ನಾಲೆಯ ನೀರು ಸರಬರಾಜು ಕಾರ್ಮಿಕರಿಗೆ 20 ತಿಂಗಳುಗಳ ಬಾಕಿ ವೇತನ ಪಾವತಿಸಿ, ವರ್ಷಪೂರ್ತಿ ಕೆಲಸ ನೀಡದಿದ್ದರೆ ಮುನಿರಾಬಾದ್ ಮುಖ್ಯ ಎಂಜಿನಿಯರ್‌ ಕಚೇರಿ ಮುಂದೆ ಫೆಬ್ರುವರಿ 26ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ತುಂಗಭದ್ರ ನೀರಾವರಿವಲಯ ಹಂಗಾಮಿ ಕಾರ್ಮಿಕರ ಸಂಘದ ಅಧ್ಯಕ್ಷ ಆರ್.ಮಾನಸಯ್ಯ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ನಾಲೆ ನೀರು ನಿರ್ವಹಣೆ ಅತ್ಯಂತ ಮುಖ್ಯವಾಗಿದ್ದು, ಸುಮಾರು 2.10 ಲಕ್ಷ ಎಕರೆಗೆ ನೀರು ಒದಗಿಸಲಾಗುತ್ತದೆ. ಕಾರ್ಮಿಕರು, ಅಧಿಕಾರಿಗಳು ಮತ್ತು ಕಾರ್ಯಪಾಲನಾ ಅಭಿಯಂತರರೂ ಒಳಗೊಂಡು ಈ ಕಾರ್ಯ ನಿರ್ವಹಿಸುತಿದ್ದಾರೆ. 12 ರಿಂದ 15 ತಾಸು ದುಡಿಯುವ ಕಾರ್ಮಿಕರಿಗೆ ಕಾನೂನಿನ ಪ್ರಕಾರ ವೇತನ ನೀಡದೇ ಕಾರ್ಮಿಕರ ಜೀವನದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ತುಂಗಭದ್ರಾ ಎಡದಂಡೆ ನೀರು ಸರಬರಾಜು ಕಾರ್ಮಿಕರಿಗೆ ಕಳೆದ 20 ತಿಂಗಳಿನಿಂದ ವೇತನ ನೀಡಿಲ್ಲ ಇದರಿಂದ ಕುಟುಂಬ ನಿರ್ವಹಣೆಗೆ ತೀವ್ರ ಸಮಸ್ಯೆಯಾಗಿದೆ ಎಂದರು.

ಈ ಕುರಿತು ಕಳೆದ 2018ರ ಸೆಪ್ಟೆಂಬರ್ ನಲ್ಲಿ ಬೆಂಗಳೂರಿನಲ್ಲಿ ಮುಷ್ಕರ ನಡೆಸಿದಾಗ, ಕಾಂಗ್ರೆಸ್ ಸರಕಾರದ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದ್ದರು. ಆದರೆಈವರೆಗೆ ಬೇಡಿಕೆಗಳು ಈಡೇರಿಲ್ಲ. ಕಾರ್ಮಿಕರಿಗೆ ನ್ಯಾಯಯುತ ಬೇಡಿಕೆಗಳ ಬಗ್ಗೆ ಇಲಾಖೆಯ ಉನ್ನತಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳೂ ಸಹ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ADVERTISEMENT

ಸಂಬಳವಿಲ್ಲದೆ ಕಾರ್ಮಿಕರ ಸಂಘ ಸಾಲದ ಸುಳಿಯಲ್ಲಿ ಸಿಲುಕಿದೆ. 20 ತಿಂಗಳ ಅವಧಿಯಲ್ಲಿ 7 ಜನ ಕಾರ್ಮಿಕರು ವಿವಿಧ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಈವರೆಗೂ ಪರಿಹಾರ ಸಿಕ್ಕಿಲ್ಲ. ಇತ್ತ ಸಂಬಳವೂ ಪಾವತಿಯಾಗುತ್ತಿಲ್ಲ. ಕಾರ್ಮಿಕರ ಸಂಬಳ ಪಾವತಿ ಮಾಡಬೇಕಾದ ಶಿವಮೊಗ್ಗ ಮೂಲದ ಗುತ್ತೇದಾರನಿಗೆ ಸರ್ಕಾರ ಸಂಬಳ ಪಾವತಿಸಿದೆ. ಆದರೆ ಕಾರ್ಮಿಕರಿಗೆ ಮಾತ್ರ ಸಂಬಳ ಸಿಗುತ್ತಿಲ್ಲ. ಇದರಿಂದ ಅನಿರ್ಧಿಷ್ಟ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಅಡವಿರಾವ್, ಮುಖಂಡರಾದ ಜಿ.ಅಮರೇಶ, ಬಸವರಾಜ ಮರ್ಕಂದಿನ್ನಿ, ಖಾಜಾಸಾಬ್ ಕವಿತಾಳ, ಹನುಮಂತು, ಅಮರೇಗೌಡ ಪತ್ರಿಕಾಗೋಷ್ಠಿಯಲ್ಲಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.