ADVERTISEMENT

ರಾಯಚೂರು | ಮೊದಲ ಹಂತದಲ್ಲಿ 3 ಪ್ರವಾಸಿ ತಾಣಗಳ ಅಭಿವೃದ್ಧಿ

ರಾಯಚೂರು ಜಿಲ್ಲೆಯಲ್ಲಿ 28 ಹೊಸ ತಾಣಗಳನ್ನು ಗುರುತಿಸಿದ ಪ್ರವಾಸೋದ್ಯಮ ಇಲಾಖೆ

ಚಂದ್ರಕಾಂತ ಮಸಾನಿ
Published 3 ನವೆಂಬರ್ 2025, 7:55 IST
Last Updated 3 ನವೆಂಬರ್ 2025, 7:55 IST
ಮುದಗಲ್‌ ಕೋಟೆ
ಮುದಗಲ್‌ ಕೋಟೆ   

ರಾಯಚೂರು: ಜಿಲ್ಲೆಯಲ್ಲಿ ನೂರಾರು ಪುರಾತನ ಸ್ಮಾರಕಗಳಿದ್ದರೂ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ವ್ಯಾಪ್ತಿಗೆ ಒಂದೇ ಒಂದು ಸ್ಮಾರಕವನ್ನೂ ಸೇರಿಸಿಲ್ಲ. ಇದೀಗ ಪ್ರವಾಸೋದ್ಯಮ ಇಲಾಖೆ ಜಿಲ್ಲೆಯಲ್ಲಿ 28 ಹೊಸ ತಾಣಗಳನ್ನು ಗುರುತಿಸಿ, ಅಭಿವೃದ್ಧಿಪಡಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದೆ.

ಸಾರ್ವಜನಿಕ–ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಅನುಮೋದನೆ ನೀಡಿದ್ದು, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ರೂಪ ದೊರಕುವ ನಿರೀಕ್ಷೆ ಇದೆ.

ಇದರಿಂದ ಆರ್ಥಿಕತೆಗೂ ಉತ್ತೇಜನ ದೊರೆಯಲಿದೆ. ಪ್ರವಾಸಿ ತಾಣಗಳಲ್ಲಿ ಕಮಾನು, ಸೂಚನಾ ಫಲಕ, ಮಾಹಿತಿ ಫಲಕ ಅಳವಡಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ಬೇಕಾದ ನೀಲನಕ್ಷೆ ಸಿದ್ಧಪಡಿಸುವ ಪ್ರಯತ್ನಗಳು ನಡೆದಿವೆ.

ADVERTISEMENT

ಪ್ರವಾಸಿ ತಾಣಗಳಿಗೆ ಪ್ರತಿದಿನ, ತಿಂಗಳು, ವಾರ್ಷಿಕ ಎಷ್ಟು ಪ್ರವಾಸಿಗಳು ಭೇಟಿ ನೀಡುತ್ತಾರೆ ಎನ್ನುವ ಮಾಹಿತಿ ಆಧರಿಸಿ ಆಯಾ ತಾಣದ ಅಭಿವೃದ್ಧಿಗೆ ಎಷ್ಟು ಅನುದಾನ ಬೇಕಾಗಬಹುದು ಎನ್ನುವ ಬಗ್ಗೆ ಕ್ರಿಯಾ ಯೋಜನೆ ಸಿದ್ಧಪಡಿಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ.

2024ರ ಜುಲೈ 9ರಂದು ಬೆಂಗಳೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಪ್ರವಾಸಿ ತಾಣಗಳ ಅಭಿವೃದ್ಧಿ ಸಾಧ್ಯತೆಗಳನ್ನು ಜಿಲ್ಲಾಧಿಕಾರಿಗಳೇ ಗುರುತಿಸಬೇಕು. ಖಾಸಗಿ ಸಹಭಾಗಿತ್ವ ಮಾತ್ರವಲ್ಲ. ಸರ್ಕಾರದ ವತಿಯಿಂದಲೂ ಹೆಜ್ಜೆ ಇರಿಸಬೇಕು ಎಂದು ಸೂಚಿಸಿದ್ದರು.

ಬಜೆಟ್‌ ಯೋಜನೆ ಸಿದ್ಧಪಡಿಸಬೇಕು. ಜಿಲ್ಲಾಧಿಕಾರಿ ಸಿದ್ಧಪಡಿಸುವ ಮಾಸ್ಟರ್‌ ಪ್ಲಾನ್‌ಗೆ ಹಣಕಾಸು ಒದಗಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಭರವಸೆ ಕೊಟ್ಟಿದ್ದರು.

‘ಜಿಲ್ಲೆಯಲ್ಲಿ ಪ್ರಸ್ತುತ 10 ಇದರ ಜತೆಗೆ 28 ಹೊಸ ತಾಣಗಳನ್ನು ಪಟ್ಟಿ ಮಾಡಿ ಕಳುಹಿಸಲಾಗಿತ್ತು. ಇವೆಲ್ಲವನ್ನೂ ಸರ್ಕಾರ ಪ್ರವಾಸಿ ತಾಣವಾಗಿ ಪರಿಗಣಿಸಿ ಅನುಮೋದನೆ ಕೊಟ್ಟಿದೆ. ಮೊದಲ ಹಂತದಲ್ಲಿ ಮಸ್ಕಿಯ ಅಶೋಕನ ಶಿಲಾಶಾಸನ ಹಾಗೂ ಗೂಗಲ್‌ನ ಅಲ್ಲಮಪ್ರಭು ದೇವಸ್ಥಾನ ಹಾಗೂ ಬ್ರಿಜ್‌ ಕಮ್‌ ಬ್ಯಾರೇಜ್‌ನ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ₹ 10 ಕೋಟಿ ಅನುದಾನ ಮಂಜೂರಾಗಿದೆ’ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಜೀರ್ ಅಹ್ಮದ್.

ರಾಯಚೂರು ತಾಲ್ಲೂಕಿನ ಕುರ್ವಕಲದ ದತ್ತಾತ್ರೇಯ ಮಂದಿರ, ದೇವಸುಗೂರಿನ ಸುಗೂರೇಶ್ವರ ದೇವಸ್ಥಾನ ಹಾಗೂ ಗಾಣದಾಳು ಪಂಚಮುಖಿ ಆಂಜನೇಯ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ಡಿಪಿಆರ್‌ ಸಿದ್ಧಪಡಿಸಲಾಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ಕೆಕೆಆರ್‌ಡಿಬಿಯಿಂದ ಅನುದಾನ ದೊರೆಯಲಿದೆ’ ಎಂದು ಹೇಳುತ್ತಾರೆ.

‘ರಾಜ್ಯ ಸರ್ಕಾರ ತಡವಾದರೂ ಜಿಲ್ಲೆಯ 28 ಪ್ರವಾಸಿ ತಾಣಗಳನ್ನು ಗುರುತಿಸಿರುವುದು ಸಂತಸ ತಂದಿದೆ. ಅವುಗಳ ಅಭಿವೃದ್ಧಿಗೂ ಅನುದಾನ ಮಂಜೂರು ಮಾಡಬೇಕು. ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡಬೇಕು’ ಎಂದು ರಾಯಚೂರು ಕೋಟೆ ಅಧ್ಯಯನ ಸಮಿತಿ ಕಾರ್ಯದರ್ಶಿ ಹಫೀಜುಲ್ಲಾ ಮನವಿ ಮಾಡುತ್ತಾರೆ.

ರಾಯಚೂರಿನ ಪಂಚ ಬೀಬಿ ಪಹಾಡ್
ರಾಯಚೂರು ತಾಲ್ಲೂಕಿನ ಮಲಿಯಾಬಾದ್‌ ಕೋಟೆಯೊಳಗಿರುವ ಕಲ್ಲಾನೆಗಳು 

ಮಸ್ಕಿ ಸ್ಮಾರಕ ಅಭಿವೃದ್ಧಿಗೆ ₹ 10 ಕೋಟಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ತೀನ್‌ ಕಂದಿಲ್‌ ಇದೀಗ ಹೊಸ ಸ್ಮಾರಕ

ಜಿಲ್ಲೆಯಲ್ಲಿನ 28 ಹೊಸ ತಾಣಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಇವೆಲ್ಲವನ್ನೂ ಸರ್ಕಾರ ಪ್ರವಾಸಿ ತಾಣಗಳನ್ನಾಗಿ ಪರಿಗಣಿಸಿ ಅನುಮೋದನೆ ನೀಡಿದೆ
ನಜೀರ್ ಅಹ್ಮದ್ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ

ಹೊಸ ಪ್ರವಾಸಿ ತಾಣಗಳು

ರಾಯಚೂರು ತಾಲ್ಲೂಕು: ನವರಂಗ ದರ್ವಾಜಾ ಕಾಟೆ ದರ್ವಾಜಾ ಮೆಕ್ಕಾ ದರ್ವಾಜಾ ಪಂಚ ಬೀಬಿ ಪಹಾಡ್ ತೀನ್‌ ಕಂದಿಲ್ ನಾರದಗಡ್ಡೆ ಮಲಿಯಾಬಾದ್ ಕೋಟೆ ಕಲ್ಲಾನೆ ಪಂಚಮುಖಿ ಆಂಜನೇಯ ದೇಗುಲ ಮಾವಿನಕೆರೆ ಕುರ್ವಕುಲದ ದತ್ತಾತ್ರೇಯ ದೇಗುಲ ದೇವಸುಗೂರಿನ ಸುಗೂರೇಶ್ವರ ಬಿಚ್ಚಾಲಿಯ ಏಕಶಿಲಾ ಬೃಂದಾವನ ಮಂಚಲಾಪುರ ಕೆರೆ ಶಕ್ತಿನಗರದ ವಿದ್ಯುತ್ ಉತ್ಪಾದನೆ ಘಟಕ ಹಾಗೂ ಕಲ್ಮಲಾ ಕರಿಯಪ್ಪ ತಾತನ ದೇಗುಲ.

ಸಿಂಧನೂರು ತಾಲ್ಲೂಕು: ಸೋಮಾಪುರದ ಅಂಬಾಮಠ ಗಾಂಧಿನಗರದ ಶಿವಾಲಯ ದೇಗುಲ ಉದ್ಬಾಳದ ಜೋಳದ ರಾಶಿ ಆಂಜನೇಯ ದೇವಸ್ಥಾನ. ಸಿರವಾರ: ಕಲ್ಲೂರಿನ ಮಹಾಲಕ್ಷ್ಮಿ ದೇಗುಲ.

ಮಾನ್ವಿ ತಾಲ್ಲೂಕು: ಮಾನ್ವಿ ಕೋಟೆ ನೀರಮಾನ್ವಿಯ ಯಲ್ಲಮ್ಮದೇವಿ ದೇಗುಲ ಹರವಿಯ ಬಸವೇಶ್ವರ ದೇಗುಲ ಗೋರ್ಕಲ್‌ನ ವೆಂಕಟೇಶ್ವರ ದೇಗುಲ ರಾಜಲಬಂಡಾ ಬ್ಯಾರೇಜ್

ದೇವದುರ್ಗ ತಾಲ್ಲೂಕು: ಗಬ್ಬೂರಿನ ದೇವಾಲಯಗಳು ಕೊಪ್ಪರದ ನರಸಿಂಹ ದೇವಸ್ಥಾನ ಗೂಗಲ್‌ನ ಅಲ್ಲಮಪ್ರಭು ದೇವಸ್ಥಾನ ಬ್ರಿಜ್‌ ಕಮ್‌ ಬ್ಯಾರೇಜ್ ವೀರಗೋಟದ ಆದಿ ಮೌನಲಿಂಗೇಶ್ವರ ದೇಗುಲ ತಿಂಥಣಿಯ ಕಾಗಿನೆಲೆ ಮಹಾಸಂಸ್ಥಾನ ಕನಕ ಪೀಠ.

ಲಿಂಗಸುಗೂರು ತಾಲ್ಲೂಕು: ಹಟ್ಟಿ ಚಿನ್ನದಗಣಿ ಪಟ್ಟಿ ಮುದಗಲ್ ಕೋಟೆ ಗೋಲಪಲ್ಲಿಯ ಬಂಡಲಗುಂಡ ಜಲಪಾತ ಗುರುಗುಂಟಾ ಅಮರೇಶ್ವರ ದೇವಸ್ಥಾನ ಅಂಕಲಿಮಠ ಪಿಕಳಿಹಾಳ. ಮಸ್ಕಿ ತಾಲ್ಲೂಕು: ಮಸ್ಕಿಯ ಮಲ್ಲಿಕಾರ್ಜುನ ದೇಗುಲ ಅಶೋಕನ ಶಿಲಾಶಾಸನ ಮಲ್ಲಿಕಾರ್ಜುನ ದೇಗುಲ (ಎನ್‌ಸಿಇಆರ್‌ಟಿ ಸಿಂಬಲ್) ಚಿಕ್ಕ ಸವದತ್ತಿ ಯಲ್ಲಮ್ಮ ದೇಗುಲ ಅಶೋಕನ ಕನ್ನಡ ಶಿಲಾ ಶಾಸನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.