ADVERTISEMENT

ಸಮಗ್ರ ಕೃಷಿಯ ಮಹತ್ವ: ಜಿಲ್ಲಾಮಟ್ಟದ ಒಂದು ದಿನದ ತರಬೇತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 15:05 IST
Last Updated 16 ಸೆಪ್ಟೆಂಬರ್ 2021, 15:05 IST
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ’ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಸಮಗ್ರ ಕೃಷಿಯ ಮಹತ್ವ’ದ ಕುರಿತ ಜಿಲ್ಲಾಮಟ್ಟದ ಒಂದು ದಿನದ ತರಬೇತಿಯಲ್ಲಿ ರೈತರು ಭಾಗವಹಿಸಿದ್ದರು
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ’ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಸಮಗ್ರ ಕೃಷಿಯ ಮಹತ್ವ’ದ ಕುರಿತ ಜಿಲ್ಲಾಮಟ್ಟದ ಒಂದು ದಿನದ ತರಬೇತಿಯಲ್ಲಿ ರೈತರು ಭಾಗವಹಿಸಿದ್ದರು   

ರಾಯಚೂರು: ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ರೈತರು ಸ್ವಾವಲಂಬನೆ ಸಾಧಿಸಬಹುದು ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಬಿ.ಕೆ. ದೇಸಾಯಿ ಹೇಳಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ’ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಸಮಗ್ರ ಕೃಷಿಯ ಮಹತ್ವ’ದ ಕುರಿತು ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಒಂದು ದಿನದ ತರಬೇತಿ ಉದ್ಘಾಟಿಸಿ ಮಾತನಾಡಿದರು.

ಮಣ್ಣು, ನೀರು ಹಾಗೂ ಇತರೆ ಸಂಪನ್ಮೂಲಗಳನ್ನು ಸಮರ್ಪಕ ಹಾಗೂ ಸಮಗ್ರವಾಗಿ ಬಳಸುವುದು ಸಮಗ್ರ ಕೃಷಿ ಪದ್ಧತಿಯ ಮುಖ್ಯ ಉದ್ದೇಶವಾಗಿದೆ. ರೈತರು ಚಾಕಚಕ್ಯತೆಯಿಂದ ವಿವಿಧ ಹಂಗಾಮಿನಲ್ಲಿ ಬರುವ ಆದಾಯದ ಮೂಲಗಳಿಗೆ ಅನುಗುಣವಾಗಿ ಕೃಷಿಯನ್ನು ಮಾಡಬೇಕು. ರೈತರು ಈ ತರಬೇತಿಯ ಸದುಪಯೋಗ ಪಡೆಯಬೇಕು ಎಂದರು.

ADVERTISEMENT

ಸಹ ಸಂಶೋಧನಾ ನಿರ್ದೇಶಕ ಡಾ. ಗುರುರಾಜ ಸುಂಕದ ಮಾತನಾಡಿ, ಕೃಷಿ ರೋಗ ನಿಯಂತ್ರಣ, ಕೀಟ ಹತೋಟಿಗೆ ಬರುವ ತಂತ್ರಜ್ಞಾನಗಳು, ವಿವಿಧ ಹಂಗಾಮಿಗೆ ಹಾಗೂ ಪ್ರಾದೇಶಿಕವಾಗಿ ಒಗ್ಗೂಡುವ ತಳಿಗಳನ್ನು ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಸಮಗ್ರ ಕೃಷಿ ಪದ್ಧತಿಯು ರೈತರಿಗೆ ಅತ್ಯಗತ್ಯ ಹಾಗೂ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಕೃಷಿ ಇಲಾಖೆಯ ಪ್ರಭಾರಿ ಜಂಟಿ ಕೃಷಿ ನಿರ್ದೇಶಕ ಡಾ. ನಯಿಮ್ ಹುಸೇನ್ ಮಾತನಾಡಿ, ಕೃಷಿಯಲ್ಲಿ ಅವೈಜ್ಞಾನಿಕ ಪದ್ಧತಿಯಿಂದ ಸಂಪನ್ಮೂಲಗಳು ವ್ಯರ್ಥವಾಗುತ್ತಿವೆ. ವೈಜ್ಞಾನಿಕ ಪದ್ಧತಿಯಿಂದ ಕೃಷಿ ಸಂಪನ್ಮೂಲಗಳನ್ನು ಸದುಪಯೋಗ ಪಡಿಸಕೊಳ್ಳಬೇಕು. ರೈತರು ಗ್ರಾಮ ಪಂಚಾಯತಿ ಮಟ್ಟದಲ್ಲಿ ಒಂದು ಎಫ್.ಪಿ.ಒ. ಸ್ಥಾಪನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕಿ ದೀಪಾ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರೈತರನ್ನು ಸುಸ್ಥಿರ ಕೃಷಿಯತ್ತ ಉತ್ತೇಜಿಸುವ ಸಲುವಾಗಿ ಸಮಗ್ರ ಕೃಷಿ ಪದ್ಧತಿಯನ್ನು ಅನುಷ್ಠಾನ ಮಾಡಲು ಸರ್ಕಾರವು ಅನುದಾನದ ಸಹಾಯವನ್ನು ಮಾಡುತ್ತದೆ. ರೈತರು ತಮ್ಮ ಜಮೀನಿನಲ್ಲಿರುವ ಸಂಪನ್ಮೂಲಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಏಕಬೆಳೆಯನ್ನು ಅವಲಂಬಿಸಬಾರದು, ರಾಯಚೂರಿನ 180 ಗ್ರಾಮಪಂಚಾಯಿತಿಗಳಲ್ಲಿ ಸಮಗ್ರ ಕೃಷಿ ಪದ್ಧತಿ ಘಟಕವನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದೆವೆ. ಈ ಗುರಿಯನ್ನು ಸಾಧಿಸಲು ರೈತರು ಸಹಕರಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.