ADVERTISEMENT

ಆತಂಕ ಉಂಟುಮಾಡಿರುವ ವಿದ್ಯುತ್‌ ಪರಿವರ್ತಕಗಳು

ಅಪಾಯ ಸಂಭವಿಸುವುದನ್ನು ತಪ್ಪಿಸಲು ಸಾರ್ವಜನಿಕರ ಒತ್ತಾಯ

ನಾಗರಾಜ ಚಿನಗುಂಡಿ
Published 14 ಅಕ್ಟೋಬರ್ 2019, 10:37 IST
Last Updated 14 ಅಕ್ಟೋಬರ್ 2019, 10:37 IST
ರಾಯಚೂರಿನ ಎನ್‌ಜಿಓ ಕಾಲೋನಿಯಲ್ಲಿ ರಸ್ತೆ ಪಕ್ಕದಲ್ಲಿ ಅಪಾಯ ಆಹ್ವಾನಿಸುತ್ತಿರುವ ವಿದ್ಯುತ್‌ ಪರಿವರ್ತಕ
ರಾಯಚೂರಿನ ಎನ್‌ಜಿಓ ಕಾಲೋನಿಯಲ್ಲಿ ರಸ್ತೆ ಪಕ್ಕದಲ್ಲಿ ಅಪಾಯ ಆಹ್ವಾನಿಸುತ್ತಿರುವ ವಿದ್ಯುತ್‌ ಪರಿವರ್ತಕ   

ರಾಯಚೂರು: ವಿದ್ಯುತ್‌ ಸಂಪರ್ಕ ಜಾಲದ ಭಾಗವಾಗಿರುವ ವಿದ್ಯುತ್‌ ಪರಿವರ್ತಕಗಳು ನಗರದ ಕೆಲವು ಬಡಾವಣೆಗಳಲ್ಲಿ, ಸಾರ್ವಜನಿಕ ರಸ್ತೆಗಳಲ್ಲಿ, ಜನದಟ್ಟಣೆ ಕೇಂದ್ರಗಳು ಹಾಗೂ ಶಾಲಾ, ಕಾಲೇಜುಗಳ ಆಸುಪಾಸು ಆತಂಕ ಹರಡುವ ಸಾಧನಗಳಂತಾಗಿವೆ!

ಸ್ವಲ್ಪ ಯಾಮಾರಿದರೂ ಯಮನ ಪಾದ ಸೇರುವುದು ಖಚಿತ ಎಂದು ದಿನನಿತ್ಯ ಜನರನ್ನು ಎಚ್ಚರಿಸುವ ರೀತಿಯಲ್ಲಿ ವಿದ್ಯುತ್‌ ಪರಿವರ್ತಕದ ತಂತಿಗಳು ಗೋಚರಿಸುತ್ತಿವೆ. ಕೆಲವು ಕಡೆ ಕಣ್ಣಿನ ನೇರದಲ್ಲೆ ವಿದ್ಯುತ್‌ ಪರಿವರ್ತಕದ ತಂತಿಗಳಿವೆ. ರಸ್ತೆಯಲ್ಲಿ ನಡೆದು ಹೋಗುವವರು, ಬೈಕ್‌ ಓಡಿಸುವವರು ಆಕಸ್ಮಾತ ಅವುಗಳ ಹತ್ತಿರ ಜಾರಿಕೊಂಡರೆ, ಗೊತ್ತಿಲ್ಲದೆ ಅವರ ಕೈಗಳು ವಿದ್ಯುತ್‌ ಪರಿವರ್ತಕದ ತಂತಿಗಳಿಗೆ ಸ್ಪರ್ಶವಾಗುವ ಸಾಧ್ಯತೆ ಎದ್ದು ಕಾಣುತ್ತಿದೆ.

ನಗರದಾದ್ಯಂತ ವಿದ್ಯುತ್‌ ಪರಿವರ್ತಕಗಳ ಸುತ್ತಲೂ ಸುರಕ್ಷತಾ ಬೇಲಿ ಅಳವಡಿಸಿಲ್ಲ. ಕನಿಷ್ಠಪಕ್ಷ ಮುಗ್ಧ ಮಕ್ಕಳು ಸಂಚರಿಸುವ ಶಾಲೆ, ಕಾಲೇಜುಗಳ ಆಸುಪಾಸಿನಲ್ಲಿರುವ ವಿದ್ಯುತ್‌ ಪರಿವರ್ತಕಗಳಿಗೂ ಬೇಲಿಗಳಿಲ್ಲ. ಕಳೆದ ಎರಡು ತಿಂಗಳಲ್ಲಿ ಲಿಂಗಸುಗೂರು, ಕೊಪ್ಪಳ ಹಾಗೂ ಕವಿತಾಳದಲ್ಲಿ ವಿದ್ಯುತ್‌ ಅವಘಡಗಳಾಗಿ, ಏಳು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಈ ಘಟನೆಗಳಿಂದ ಜೆಸ್ಕಾಂ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ADVERTISEMENT

ಆರಂಭದಲ್ಲಿ ವಿದ್ಯುತ್‌ ಪರಿವರ್ತಕಗಳನ್ನು ಅಳವಡಿಸುವಾಗ ನಿಲುಕದ ಎತ್ತರದಲ್ಲಿಯೇ ಹಾಕಿರಬಹುದು. ಆದರೆ, ವಿದ್ಯುತ್‌ ಕಂಬವನ್ನು ಬಳಸಿಕೊಂಡು ಸಿಸಿ ರಸ್ತೆಗಳು ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳು ಆಗಿದ್ದರಿಂದ ಎತ್ತರ ಕಡಿಮೆಯಾಗಿದ್ದು, ಅಪಾಯಕ್ಕೆ ಎಡೆಮಾಡುವುದು ಹೆಚ್ಚಾಗಿದೆ.

ಟಿಪ್ಪು ಸುಲ್ತಾನ್‌ ರಸ್ತೆಯಿಂದ ಕೋಟೆ ಮಾರ್ಗ, ಮಡ್ಡಿಪೇಟೆ ಬಡಾವಣೆ, ಸಿಯಾತಾಲಾಬ್‌, ದೇವರ ಕಾಲನಿ, ಡ್ಯಾಡಿ ಕಾಲನಿ, ನಿಜಲಿಂಗಪ್ಪ ಕಾಲನಿ, ಕೆಇಬಿ ಕಾಲನಿಗಳಲ್ಲಿ ವಿದ್ಯುತ್‌ ಪರಿವರ್ತಕಗಳ ತಂತಿಗಳು ಸಾಮಾನ್ಯ ಎತ್ತರದಲ್ಲಿವೆ. ಮುಖ್ಯವಾಗಿ ಜಾನುವಾರುಗಳಿಗೆ ಹೆಚ್ಚು ಅಪಾಯ ತರುವಂತಿವೆ.

24 ಜಾಗಗಳ ಗುರುತು

ನಗರದಲ್ಲಿ ವಿದ್ಯುತ್‌ ಸಂಪರ್ಕ ವ್ಯವಸ್ಥೆಯಲ್ಲಿ ಅಪಾಯಕಾರಿ ಎನ್ನುವ 24 ಜಾಗಗಳನ್ನು ಗುರುತಿಸಲಾಗಿದೆ. ವಿದ್ಯುತ್‌ ಪರಿವರ್ತಕಗಳನ್ನು ಎತ್ತರಿಸುವುದು, ವಿದ್ಯುತ್‌ ಕಂಬ ಸ್ಥಳಾಂತರಿಸುವುದು ಹಾಗೂ ತಂತಿಗಳ ಬದಲಾವಣೆ ಮಾಡಬೇಕಿದೆ. ಜನರಿಗೆ ತೊಂದರೆ ಆಗದ ರೀತಿ ಆದಷ್ಟು ಬೇಗನೆ ಯೋಜಿತ ಕಾಮಗಾರಿ ಪೂರ್ಣ ಮಾಡುತ್ತೇವೆ ಎಂದು ಜೆಸ್ಕಾಂ ರಾಯಚೂರು ವಲಯದ ಪ್ರಭಾರ ಎಸ್‌ಇ ರಾಜೇಂದ್ರ ಎಂ. ಹೇಳಿದರು.

ಸಹಕಾರ ಅಗತ್ಯ

ಬಹುತೇಕ ಬಡಾವಣೆಗಳಲ್ಲಿ ಕಟ್ಟಡಗಳನ್ನು ನಿರ್ಮಿಸುವ ಮೊದಲೇ ವಿದ್ಯುತ್‌ ಕಂಬ ಅಳವಡಿಸಲಾಗಿರುತ್ತದೆ. ವಿದ್ಯುತ್‌ ಹಾಗೂ ಕಂಬಗಳಿಂದ ಸುರಕ್ಷತೆ ಕಾಯ್ದುಕೊಂಡು ಕಟ್ಟಡ ನಿರ್ಮಾಣ ಮಾಡಿಕೊಳ್ಳಬೇಕು. ಜೆಸ್ಕಾಂ ಸಿಬ್ಬಂದಿ ಕಂಬಗಳನ್ನು ಸ್ಥಳಾಂತರಿಸಿ ಬೇರೆ ಕಡೆಗೆ ಹಾಕುವಾಗ ಕೆಲವರು ಅಡ್ಡಪಡಿಸುವ ಪ್ರಸಂಗಗಳು ನಡೆಯುತ್ತವೆ. ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಕಂಬಗಳನ್ನು ಅಳವಡಿಸುವುದಕ್ಕೆ ಎಲ್ಲರೂ ಸಹಕರಿಸಬೇಕು ಎನ್ನುವುದು ಜೆಸ್ಕಾಂ ಅಧಿಕಾರಿಗಳ ಮನವಿ.

***

ಜನದಟ್ಟಣೆ ಇರುವ ರಸ್ತೆಗಳಿಗೆ ಹೊಂದಿಕೊಂಡು ಟ್ರಾನ್ಸ್‌ಪಾರ್ಮರ್‌ ಇಟ್ಟಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ. ಇದರಿಂದ ಜೀವಕ್ಕೆ ಅಪಾಯವಿದೆ. ಕೂಡಲೇ ಜೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಸ್ಥಳಾಂತರಿಸಬೇಕು.

-ಪ್ರಿಯಂಕಾ ಅಬಕಾರಿ, ವಿದ್ಯಾರ್ಥಿನಿ

ನಗರದಲ್ಲಿ ಕೆಲವು ಶಾಲೆಗಳಿಗೆ ಹೊಂದಿಕೊಂಡು ವಿದ್ಯುತ್‌ ಪರಿವರ್ತಕಗಳಿವೆ. ಸುತ್ತಲೂ ಬೇಲಿ ಕೂಡಾ ಹಾಕಿಲ್ಲ. ಮಳೆಗಾಲದಲ್ಲಿ ತುಂಬಾ ಅಪಾಯ ಇರುತ್ತದೆ. ಕೂಡಲೇ ಸುರಕ್ಷತೆಗೆ ಕ್ರಮ ಆಗಬೇಕಿದೆ.

-ಸುಜಾತಾ, ಪತ್ರಿಕೋದ್ಯಮ ವಿದ್ಯಾರ್ಥಿನಿ

ಅನಾಹುತ ಆಗುವ ಮೊದಲೇ ಎಚ್ಚೆತ್ತುಕೊಳ್ಳಬೇಕು. ಟಿಸಿಗಳನ್ನು ಹಾಕಿದಾಗ ಅದಕ್ಕೊಂದು ಸುರಕ್ಷತಾ ಬೇಲಿ ಕಡ್ಡಾಯವಾಗಿ ಹಾಕಬೇಕು. ತಂತಿಗಳು ಜೋತು ಬೀಳದಂತೆ ನೋಡಿಕೊಳ್ಳಬೇಕು.

-ಮಹಾವೀರದಾಸ್, ವ್ಯಾಪಾರಿ

ಮಂತ್ರಾಲಯ ರಸ್ತೆ ಐಬಿ ಎದುರು ಪಾದಚಾರಿ ಮಾರ್ಗದ ನಡುವೆಯೇ ಟಿಸಿ ಇದೆ. ಇದಕ್ಕೆ ಹೊಂದಿಕೊಂಡು ಸರ್ಕಾರಿ ನೌಕರರ ಮನೆಗಳಿದ್ದರೂ ಜೆಸ್ಕಾಂ ಎಂಜಿನಿಯರುಗಳು ಕ್ರಮ ವಹಿಸಿ, ಸ್ಥಳಾಂತರಿಸುತ್ತಿಲ್ಲ. ಈ ಬಗ್ಗೆ ದೂರು ಕೊಟ್ಟರೂ ಕೆಲಸ ಮಾಡಿಲ್ಲ.
-ಮೊಹ್ಮದ್‌ ರಫಿ, ಪಂಕ್ಚರ್‌ ಶಾಪ್‌

ವಿದ್ಯುತ್‌ ಸಂಪರ್ಕ ವ್ಯವಸ್ಥೆಯಲ್ಲಿ ಏನಾದರೂ ಸಾಧನಗಳು ಅಪಾಯಕಾರಿಯಾಗಿವೆ ಎಂಬುದು ಗೊತ್ತಾದರೆ, ಕೂಡಲೇ ಸಂಬಂಧಿಸಿದ ಜೆಸ್ಕಾಂ ಅಧಿಕಾರಿಗಳಿಗೆ ಜನರು ದೂರು ನೀಡಬೇಕು. ಅಪಾಯ ತಪ್ಪಿಸಲು ಕ್ರಮ ವಹಿಸಲಾಗುವುದು.

-ರಾಜೇಶ ಎಂ., ಜೆಸ್ಕಾಂ ರಾಯಚೂರು ವಲಯದ ಪ್ರಭಾರ ಎಸ್‌ಇ

ವಿದ್ಯುತ್‌ ಸಂಪರ್ಕ ವ್ಯವಸ್ಥೆಯಲ್ಲಿ ಏನಾದರೂ ಸಾಧನಗಳು ಅಪಾಯಕಾರಿಯಾಗಿವೆ ಎಂಬುದು ಗೊತ್ತಾದರೆ, ಕೂಡಲೇ ಸಂಬಂಧಿಸಿದ ಜೆಸ್ಕಾಂ ಅಧಿಕಾರಿಗಳಿಗೆ ಜನರು ದೂರು ನೀಡಬೇಕು. ಅಪಾಯ ತಪ್ಪಿಸಲು ಕ್ರಮ ವಹಿಸಲಾಗುವುದು.

-ರಾಜೇಶ ಎಂ., ಜೆಸ್ಕಾಂ ರಾಯಚೂರು ವಲಯದ ಪ್ರಭಾರ ಎಸ್‌ಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.