ADVERTISEMENT

ಶಕ್ತಿನಗರ: ಸಾರಿಗೆ ಸಮಸ್ಯೆ – ಬಸ್ ಟಾಪ್ ಮೇಲೆ ವಿದ್ಯಾರ್ಥಿಗಳ ಪ್ರಯಾಣ

ಉಮಾಪತಿ ಬಿ.ರಾಮೋಜಿ
Published 20 ಜುಲೈ 2022, 19:30 IST
Last Updated 20 ಜುಲೈ 2022, 19:30 IST
ಶಕ್ತಿನಗರದ ಕೊರವಿಹಾಳ್ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಬಸ್‌ಗಳ ಕೊರತೆಯಿಂದಾಗಿ ಬಸ್‌ಗಳ‌ ಟಾಪ್ ಮೇಲೆಯೇ ವಿದ್ಯಾರ್ಥಿಗಳು ಕುಳಿತಿರುವುದು
ಶಕ್ತಿನಗರದ ಕೊರವಿಹಾಳ್ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಬಸ್‌ಗಳ ಕೊರತೆಯಿಂದಾಗಿ ಬಸ್‌ಗಳ‌ ಟಾಪ್ ಮೇಲೆಯೇ ವಿದ್ಯಾರ್ಥಿಗಳು ಕುಳಿತಿರುವುದು   

ಶಕ್ತಿನಗರ: ಸಗಮಕುಂಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ತಮ್ಮ ನಿತ್ಯದ ಕೆಲಸಗಳಿಗೆ ಪರದಾಡುತ್ತಿದ್ದಾರೆ.

ಗ್ರಾಮಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೆಲವೇ ಕೆಲವು ಬಸ್‌ಗಳು ಸಂಚರಿಸುತ್ತವೆ. ಹಾಗಾಗಿ, ಇರುವ ಬಸ್‌ಗಳಲ್ಲೇ ಕಿಕ್ಕಿರಿದು ಪ್ರಯಾಣಿಕರಿರುತ್ತಾರೆ. ವಿದ್ಯಾರ್ಥಿಗಳು ಸೇರಿದಂತೆ ಇತರರು ಅನಿವಾರ್ಯವಾಗಿ ಬಸ್‌ ಟಾಪ್‌ ಮೇಲೆ ಕುಳಿತು ಪ್ರಯಾಣ ಮಾಡಬೇಕಾದ ಸ್ಥಿತಿ ಇದೆ. ಇಲ್ಲದಿದ್ದರೆ ದುಬಾರಿ ಹಣ ತೆತ್ತು ಖಾಸಗಿ ವಾಹನಗಳಲ್ಲಿ ಪ್ರಯಾಣ ಮಾಡುತ್ತಾರೆ. ಬಡವರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಹೆಚ್ಚು ಹಣ ನೀಡುವ ಶಕ್ತಿ ಯಾರಿಗೂ ಇಲ್ಲ.

ಸಗಮಕುಂಟ, ಕೊರವಿಹಾಳ್, ಕೊರ್ತಕುಂದ, ಮಾಮನದೊಡ್ಡಿ , ಇಬ್ರಾಹಿಂದೊಡ್ಡಿ ಗ್ರಾಮಗಳಿಗೆ ತೆರಳಲು ಬೆರಳೆಣಿಕೆಯ ಬಸ್‌ಗಳನ್ನು ಅವಲಂಬಿಸಬೇಕಾಗಿದೆ.

ADVERTISEMENT

‘ಬೆಳಿಗ್ಗೆ ಹಾಗೂ ಸಂಜೆ ವೇಳೆ ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆ ಇಲ್ಲದೆ ಖಾಸಗಿ ವಾಹನಗಳ ಮೊರೆ ಹೋಗಬೇಕು. ಅವು ‌ನಿಗದಿತ ಸಮಯಕ್ಕೆ ಬಾರದಿದ್ದಾಗ ಮಕ್ಕಳು ಆ ದಿನ ಶಾಲೆಗೆ ಹೋಗದೇ ಮನೆಯಲ್ಲೇ ಉಳಿಯಬೇಕಾಗುತ್ತದೆ. ಈ ಬಗ್ಗೆ ಸಾಕಷ್ಟು ಬಾರಿ ಸಾರಿಗೆ ಇಲಾಖೆಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ದೂರಿದರು.

ಕೊರವಿಹಾಳ್ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಬಸ್‌ಗಳ ಕೊರತೆಯಿಂದಾಗಿ ಬರುವ ಬಸ್‌ಗಳ‌ ಟಾಪ್ ಮೇಲೆಯೇ ಕುಳಿತು ಸಂಚರಿಸಬೇಕಾಗಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಗ್ರಾಮದಿಂದ‌ ವಿದ್ಯಾರ್ಥಿಗಳು ಶಾಲೆ– ಕಾಲೇಜುಗಳಿಗೆ ರಾಯಚೂರು ನಗರಕ್ಕೆ ಬರುತ್ತಾರೆ. ಎರಡೂ ಹೊತ್ತು ಸಮಯಲ್ಲಿ ಟಾಪ್ ಮೇಲೆಯೇ ಕುಳಿತು ಪ್ರಯಾಣ ಮಾಡುತ್ತಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಬಸ್‌ಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ನಿರ್ಲಕ್ಷಿಸಿದರೆ, ಮುಂದೆ ನಡೆಯಬಹುದಾದ ಅವಘಡಗಳಿಗೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

**

ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ದೂರದ ರಾಯಚೂರು ನಗರಕ್ಕೆ ಹೋಗಬೇಕು. ಒಂದೆರಡು ಬಸ್‌ಗಳನ್ನು ಬಿಟ್ಟು ಬೇರೆ ಸಮಯದಲ್ಲಿ ಬಸ್ ಸೌಲಭ್ಯವಿಲ್ಲ. ಬಸ್ ಸೌಕರ್ಯವಿಲ್ಲದೆ ಇಂದಿಗೂ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
–ರವೀಂದ್ರ, ಕೊರವಿಹಾಳ್ ಗ್ರಾಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.