ADVERTISEMENT

ಮಾನ್ವಿ: ರಸ್ತೆಯ ಸೊಬಗಿಗೆ ಸಾಲು ಗಿಡಗಳ ಮೆರಗು

ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ಕೆ ನಾಗರಿಕರ ಮೆಚ್ಚುಗೆ

ಬಸವರಾಜ ಬೋಗಾವತಿ
Published 30 ಜುಲೈ 2021, 6:31 IST
Last Updated 30 ಜುಲೈ 2021, 6:31 IST
ಮಾನ್ವಿ ಪಟ್ಟಣದಲ್ಲಿ ರಾಜ್ಯ ಹೆದ್ದಾರಿಯ ವಿಭಜಕದ ಮೇಲೆ ಸಾಲು ಗಿಡಗಳು
ಮಾನ್ವಿ ಪಟ್ಟಣದಲ್ಲಿ ರಾಜ್ಯ ಹೆದ್ದಾರಿಯ ವಿಭಜಕದ ಮೇಲೆ ಸಾಲು ಗಿಡಗಳು   

ಮಾನ್ವಿ:ಮಾನ್ವಿ ಪಟ್ಟಣದ ಮೂಲಕ ಹಾದುಹೋಗಿರುವ ರಾಜ್ಯ ಹೆದ್ದಾರಿಯ ವಿಭಜಕದ ಮೇಲೆ ಹಾಗೂ ಹೆದ್ದಾರಿಯ ಬದಿಯಲ್ಲಿ ಬೆಳೆದು ನಿಂತಿರುವ ಗಿಡಗಳು ಎಲ್ಲರ ಗಮನ ಸೆಳೆಯುತ್ತಿವೆ.

ಪಟ್ಟಣದ ಆಟೊ ನಗರದಿಂದ ಎಪಿಎಂಸಿ ವರೆಗಿನ ರಸ್ತೆ ವಿಭಜಕದ ಮೇಲೆ ಈ ಸಾಲು ಗಿಡಗಳು ಕಾಣುತ್ತವೆ. ರಸ್ತೆಯುದ್ದಕ್ಕೂ ಸಾಲು ಸಾಲಾಗಿ ಕಾಣುವ ಗಿಡಗಳು ರಸ್ತೆಯ ಸೊಬಗನ್ನು ಹೆಚ್ಚಿಸಿವೆ. ನಂತರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹಿರೇಕೊಟ್ನೇಕಲ್, ಪೋತ್ನಾಳದವರೆಗೆ ರಾಜ್ಯ ಹೆದ್ದಾರಿಯ ಬದಿಯಲ್ಲಿ ಸಾವಿರಾರು ಗಿಡಗಳನ್ನು ಬೆಳೆಸಲಾಗಿದೆ.

ರಸ್ತೆಯುದ್ದುಕ್ಕೂ ಕಂಡು ಬರುವ ಬೇವು, ಹೊಂಗೆ, ತಪಸಿ, ಬಸವನಪಾದ, ಆರಳಿ ಗಿಡ, ಆಲದ ಗಿಡ, ಕಣಗಿಲೆ ಗಿಡ, ಇತರ ಅಲಂಕಾರಿಕ ಗಿಡಗಳು ಪ್ರಯಾಣಿಕರು ಹಾಗೂ ವಾಹನ ಸವಾರರ ಗಮನ ಸೆಳೆಯುತ್ತವೆ.

ADVERTISEMENT

ವರ್ಷದ ಹಿಂದೆ ಅರಣ್ಯ ಇಲಾಖೆಯ ಅಧಿಕಾರಿ ರಾಜೇಶ್ ನಾಯಕ ಹಾಗೂ ಸಿಬ್ಬಂದಿ ವಿಶೇಷ ಆಸಕ್ತಿವಹಿಸಿ ರಸ್ತೆ ವಿಭಜಕದ ಮೇಲೆ ಹಾಗೂ ರಸ್ತೆ ಬದಿಯ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟಿದ್ದರು. ಅಂದು ನೆಟ್ಟಿದ್ದ ಸಸಿಗಳು ಈಗ ಗಿಡಗಳಾಗಿ ಬೆಳೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ.

ಸಾಲು ಗಿಡಗಳು ಆಕರ್ಷಕವಾಗಿ ಕಾಣುವ ಮೂಲಕ ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಿವೆ. ಬಿಡಾಡಿ ದನಗಳು ತಿನ್ನದಂತೆ ಹಾಗೂ ನೀರಿನ ಸಮಸ್ಯೆಯಿಂದ ಒಣಗದಂತೆ ಸಸಿಗಳ ನಿರ್ವಹಣೆ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯಿಂದ ಅಧಿಕಾರಿ ಹಾಗೂ ಸಿಬ್ಬಂದಿ ಸರ್ಕಾರದ ಯೋಜನೆ ಅಡಿಯಲ್ಲಿ ಈ ಸಾಲು ಗಿಡಗಳನ್ನು ಬೆಳೆಸದೆ ಸ್ವಯಂ ಪ್ರೇರಣಿ ಹಾಗೂ ಪರಿಸರದ ಕುರಿತು ಕಾಳಜಿಯಿಂದ ಬೆಳೆಸಿರುವುದು ಗಮನಾರ್ಹ. ವಲಯ ಅರಣ್ಯಾಧಿಕಾರಿ ರಾಜೇಶ್ ನಾಯಕ ಹಾಗೂ ಇಲಾಖೆಯ ಗುತ್ತಿಗೆ ಸಿಬ್ಬಂದಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.