ರಾಯಚೂರು: ‘ಬುಡಕಟ್ಟು ಸಮುದಾಯದ ಕಟ್ಟಕಡೆಯ ವ್ಯಕ್ತಿಗಳಿಗೂ ಸರ್ಕಾರದ ಯೋಜನೆಯ ಪ್ರಯೋಜನ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು‘ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಡಾ.ಟಿ. ರೋಣಿ ಹೇಳಿದರು.
ಇಲ್ಲಿಯ ಕೃಷಿ ಎಂಜಿನಿಯರಿಂಗ್ ಕಾಲೇಜಿನ ಸಿಲ್ವರ್ ಜುಬ್ಲಿ ಸೆಮಿನಾರ್ ಹಾಲ್‌ನಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ವತಿಯಿಂದ ಆದಿ ಕರ್ಮಯೋಗಿ ಅಭಿಯಾನದ ಪ್ರಯುಕ್ತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಧರ್ತಿ ಅಭಾ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ಮೊದಲ ಹಂತವಾಗಿ ಏಳು ಇಲಾಖೆಗಳು ಪರಿಶಿಷ್ಟ ಪಂಗಡದ ಜನಾಂಗದವರಿಗೆ ತರಬೇತಿ ಕೊಡಲಾಗುತ್ತಿದೆ.ಇಲಾಖೆಯಿಂದ ತರಬೇತಿಗೆ ಆಗಮಿಸಿದವರು ತರಬೇತಿಯಲ್ಲಿ ನೀಡುವ ಸಲಹೆ ಸೂಚನೆಗಳನ್ನು ಅನುಸರಿಸಿ ಅಭಿಯಾನದ ಉದ್ದೇಶ ಮತ್ತು ಮಹತ್ವ ಅರಿಯಬೇಕು’ ಎಂದು ತಿಳಿಸಿದರು.
ನೋಡಲ್ ಅಧಿಕಾರಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವಮಾನಪ್ಪ ಮಾತನಾಡಿ, ‘ಆದಿಕರ್ಮಯೋಗಿ ಕಾರ್ಯಕ್ರಮವು ಬುಡಕಟ್ಟು ಪ್ರದೇಶಗಳಲ್ಲಿ ಬಹುಶ್ರೇಣಿಯ ಜವಾಬ್ದಾರಿಯುತ ಆಡಳಿತವನ್ನು ರೂಪಿಸುವ ಗುರಿ ಹೊಂದಿದೆ‘ ಎಂದು ಹೇಳಿದರು.
‘ಮೊದಲ ಹಂತದಲ್ಲಿ ಇಲಾಖೆಗಳ ಜಿಲ್ಲಾ ಮಾಸ್ಟರ್ ಟ್ರೇರ‍್ಸ್ ಎಂದು ಗುರುತಿಸಲಾದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ 4 ದಿನಗಳ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ. ನಂತರ ತಾಲ್ಲೂಕು ಮಟ್ಟದಲ್ಲೂ ತರಬೇತಿ ನೀಡಲಾಗುವುದು’ ಎಂದರು.
ತರಬೇತಿ ಪಡೆದ ಬ್ಲಾಕ್ ಮಾಸ್ಟರ್ ಟ್ರೇನರ್‌ಗಳು ಆಯಾ ತಾಲ್ಲೂಕುಗಳಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ನೋಡಲ್ ಅಧಿಕಾರಿಗಳೊಂದಿಗೆ ಉಳಿದ ಇಲಾಖೆಗಳು ಜಿಲ್ಲೆಯಲ್ಲಿ ಗುರುತಿಸಲಾದ 243 ಗ್ರಾಮಗಳಲ್ಲಿ ಮಾಹಿತಿಯನ್ನು ತಲುಪಿಸಬೇಕು ಎಂದು ತಿಳಿಸಲಾಯಿತು.
ಏಳು ಇಲಾಖೆಗಳಾದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಅರಣ್ಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಮಾಸ್ಟರ್ ಟ್ರೇನರ್‌ಗಳಾಗಿ ಭಾಗವಹಿಸಿದ್ದರು.
ಮಾನ್ವಿಯ ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಮಹ್ಮದ್ ಯುನೂಸ್ ಅವರು ಪಿ.ಪಿ.ಟಿ. ಮೂಲಕ ತರಬೇತಿ ನೀಡಿದರು. ಜಿಲ್ಲಾಮಟ್ಟದ ಮಾಸ್ಟರ್ ಟ್ರೇನರ್‌ಗಳಾದ ರುಕ್ಮೀಣಿಬಾಯಿ, ಈಶ್ವರ ದಾಸಪ್ಪನವರ ಮತ್ತು ಧತ್ತಾತ್ರೇಯ ಅವರು ಮೂಡ್ ಮೀಟರ್ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಮಾಣ ಪತ್ರ ವಿತರಣೆ: ಆದಿ ಕರ್ಮಯೋಗಿ ಅಭಿಯಾನ ತರಬೇತಿ ಕಾರ್ಯಾಗಾರದಲ್ಲಿ 3 ದಿನಗಳವರೆಗೆ ಭಾಗವಹಿಸಿದ ತರಬೇತಿದಾರರಿಗೆ ಪ್ರಮಾಣ ನೀಡಲಾಯಿತು.
ಕೃಷಿ ಎಂಜಿನಿಯರಿಂಗ್ ಕಾಲೇಜಿನ ಡೀನ್ ಡಾ.ಮಲ್ಲಿಕಾರ್ಜುನ ಅಯ್ಯನಗೌಡರ್, ಕೃಷಿ ವಿಶ್ವ ವಿದ್ಯಾಲಯದ ಉಪ ನಿರ್ದೇಶಕ ರಾಜಣ್ಣ, ಮಾನ್ವಿ ಬಿಇಒ ಚಂದ್ರಶೇಖರ ದೊಡ್ಮನಿ ಉಪಸ್ಥಿತರಿದ್ದರು.
ಬೆಂಗಳೂರಲ್ಲಿ ನಡೆದ ಪ್ರ‍್ರಾದೇಶಿಕ ಕಾರ್ಯಾಗಾರ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಯೋಜನೆ ಬುಡಕಟ್ಟು ಪ್ರದೇಶಗಳಲ್ಲಿ ಬಹುಶ್ರೇಣಿಯ ಜವಾಬ್ದಾರಿಯುತ ಆಡಳಿತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.