ಸಿಂಧನೂರು ತಾಲ್ಲೂಕಿನ ಸಿಂಗಾಪುರ ಬಳಿ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸ್ಥಳದಿಂದ ಬಳ್ಳಾರಿ ಜಿಲ್ಲೆಯ ಹಳ್ಳಿಗಳಿಗೆ ಸಿಂಧನೂರು ತಾಲ್ಲೂಕಿನ ಹಳ್ಳಿಗಳಿಂದ ದೋಣಿಯನ್ನು ಆಶ್ರಯಿಸಿ ನದಿ ದಾಟುತ್ತಿರುವ ಜನ
ಸಿಂಧನೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಗಡಿ ಗ್ರಾಮ ಸಿಂಗಾಪುರ ಮತ್ತು ಸಿರುಗುಪ್ಪ ತಾಲ್ಲೂಕಿನ ನಿಟ್ಟೂರು ಮಧ್ಯದಲ್ಲಿ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣ ಮಾಡುವ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಜನರ ಕನಸು ಇನ್ನೂ ನನಸಾಗಿಯೇ ಉಳಿದಿದೆ.
ಕಳೆದ ಎರಡು ಅವಧಿಗೆ ಸಂಸದರಾಗಿದ್ದ ಕರಡಿ ಸಂಗಣ್ಣ, ವಿಧಾನ ಪರಿಷತ್ ಸದಸ್ಯರಾಗಿದ್ದ ಎನ್.ಶಂಕ್ರಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಆದಿಮನಿ ವೀರಲಕ್ಷ್ಮಿ ಮತ್ತು ಸಿರುಗುಪ್ಪ ಶಾಸಕರಾಗಿದ್ದ ಸೋಮಲಿಂಗಪ್ಪ ಅವರು 2018ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು.
ತದನಂತರ ರಾಷ್ಟ್ರೀಯ ಹೆದ್ದಾರಿ ಈ ನದಿಯನ್ನು ಸಂಪರ್ಕಿಸುತ್ತಿಲ್ಲವಾದ್ದರಿಂದ ಈ ಸೇತುವೆಯ ಅಗತ್ಯವಿಲ್ಲವೆಂದು ಸೇತುವೆ ನಿರ್ಮಾಣದ ಯೋಜನೆಯನ್ನೇ ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಸಂಸದ ಕರಡಿ ಸಂಗಣ್ಣ ಅವರು ಪುನಃ ಸಮೀಕ್ಷೆ ಮಾಡಿಸಿ ಬೀದರ್– ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಸಿಂಧನೂರು ತಾಲ್ಲೂಕಿನ ವೆಂಕಟೇಶ್ವರ ಕ್ಯಾಂಪಿನ ಬಳಿ ಸಂಪರ್ಕ ಕಲ್ಪಿಸುತ್ತದೆ ಎಂದು ಪುನಃ ಕೇಂದ್ರ ಸರ್ಕಾರದ ಗಮನಕ್ಕೆ ತಂದು, ಈ ಯೋಜನೆಯನ್ನು ಜಾರಿಗೊಳಿಸಲು ಅನುಮತಿ ಪಡೆದಿದ್ದಾರೆ. ಆದಾಗ್ಯೂ ಈ ಯೋಜನೆಗೆ ಸಂಬಂಧಿಸಿ ಯಾವುದೇ ಕಾಮಗಾರಿ ನಡೆದಿಲ್ಲವೆಂದು ಸಿಂಗಾಪುರ ಗ್ರಾಮದ ಸಮಾಜಸೇವಕ ಬಿ.ಶಾಂತಪ್ಪ ಹೇಳುತ್ತಾರೆ.
ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಸಹ ಈ ಯೋಜನೆ ಅನ್ವಯಿಸುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿದೆ ಎಂದು ಹೇಳಿದ್ದರು. ಆದರೆ ಇವರುಗಳು ನೀಡಿದ ಯಾವ ಭರವಸೆಗಳು ಸಹ ಕಾರ್ಯರೂಪಕ್ಕೆ ಬಂದಿಲ್ಲವೆಂದು ಶಿವಶಂಕರಗೌಡ, ಪಂಪಾಪತಿ ಅಂಗಡಿ, ದೇವನಕಲ್ ಪಂಪಾಪತಿಗೌಡ, ಮಂಜುನಾಥ ಹರಿಜನ್ ಅವರು ಆರೋಪಿಸಿದ್ದಾರೆ.
ಕೊಪ್ಪಳ ಲೋಕಸಭಾ ಸದಸ್ಯರಾದ ರಾಜಶೇಖರ ಹಿಟ್ನಾಳ ಅವರು ಆಯ್ಕೆಯಾದ ನಂತರ ಒಮ್ಮೆಯೂ ಈ ಯೋಜನೆಯ ಕುರಿತಾಗಿ ಮಾತನಾಡಿಲ್ಲ. ಒಂದು ಬಾರಿಯೂ ಅಭಿವೃದ್ಧಿ ಕೆಲಸದ ಬಗ್ಗೆ ಚಕಾರ ಎತ್ತಿಲ್ಲವೆಂದು ಸಿಂಗಾಪುರ ಗ್ರಾಮದ ಹನುಮಂತಪ್ಪ, ಮುಕ್ಕುಂದಾ ಗ್ರಾಮದ ಶ್ರೀನಾಥ ಆಪಾದಿಸಿದ್ದಾರೆ.
ಹರಿಗೋಲೆ ಗತಿ: ಸಿಂಧನೂರು ತಾಲ್ಲೂಕಿನ ಸಿಂಗಾಪುರ, ಮುಕ್ಕುಂದಾ, ಅಂಬಾಮಠ, ದಢೇಸುಗೂರು, ಕೆಂಗಲ್ ಮತ್ತಿತರ ನದಿಪಾತ್ರದ ಹಳ್ಳಿಗಳು ಹಾಗೂ ಗಂಗಾವತಿ ತಾಲ್ಲೂಕಿನ ಕೆಲ ಹಳ್ಳಿಗಳ ಜನರು ದೋಣಿಯನ್ನು ಆಶ್ರಯಿಸಿಯೇ ನದಿ ದಾಟಬೇಕಾಗಿದೆ. ಅರ್ಧತಾಸಿನಲ್ಲಿ ತಲುಪಬೇಕಾದ ಪಟ್ಟಣಗಳನ್ನು ಮೂರ್ನಾಲ್ಕು ತಾಸು ಕ್ರಮಿಸಿ ಮುಟ್ಟಬೇಕಾಗುತ್ತದೆ. ಈ ಸೇತುವೆ ನಿರ್ಮಾಣಗೊಂಡರೆ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳದ ಹಳ್ಳಿಗಳಿಗೆ ಅನುಕೂಲವಾಗುತ್ತದೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.