ADVERTISEMENT

ರಾಯಚೂರು: ಬಾಕಿ ವೇತನ ಪಾವತಿಗೆ ಎಐಸಿಸಿಟಿಯು ಮನವಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:01 IST
Last Updated 3 ಡಿಸೆಂಬರ್ 2025, 7:01 IST
   

ರಾಯಚೂರು:  ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ(ಎಐಸಿಸಿಟಿಯು) ಕೇಂದ್ರ ಸಮಿತಿ ವತಿಯಿಂದ ಕಾರ್ಮಿಕರು ಯರಮರಸ್ ವೃತ್ತದ ಅಧೀಕ್ಷಕ ಎಂಜಿನಿಯರ್‌ಗೆ ಮನವಿ ಸಲ್ಲಿಸಿದರು

ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ಸರ್ಕಾರದ ನಿರ್ದೇಶನದಂತೆ ವರ್ಷಪೂರ್ತಿ ಕೆಲಸ ಕೊಡಬೇಕು. ಕಾರ್ಮಿಕರ ವೇತನ, ಪಿಎಫ್, ಇಎಸ್ಐ ಪಾವತಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ನೇರ ಪಾವತಿಗೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ಯರಮರಸ್ ವೃತ್ತದ ಸಿಂಧನೂರು, ಸಿರಿವಾರ ಮತ್ತು ಯರಮರಸ್ ವಿಭಾಗದ ಎಲ್ಲಾ ಉಪ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಜೂನ್ ತಿಂಗಳಿಂದ ಇಂದಿನವರೆಗೂ ವೇತನ ಪಾವತಿ ಮಾಡಿಲ್ಲ ತಕ್ಷಣವೇ ಬಾಕಿ ವೇತನ, ಪಿಎಫ್, ಇಎಸ್ಐ ಪಾವತಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಏಪ್ರಿಲ್‌ನಿಂದ ಅನ್ವಯವಾಗುವಂತೆ ಕಾರ್ಮಿಕರ ತುಟ್ಟಿ ಭತ್ಯೆಯನ್ನು ತಕ್ಷಣ ಕಾರ್ಮಿಕರ ಖಾತೆಗೆ ಜಮಾ ಮಾಡಬೇಕು. ಟೆಂಡರ್ ಪಡೆದ ಗುತ್ತೇದಾರರು ಗುತ್ತಿಗೆ ಒಪ್ಪಂದದಂತೆ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನ, ಪಿಎಫ್, ಇಎಸ್ಐ ಪಾವತಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

‘ಕಾಲುವೆ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಸಮವಸ್ತ್ರ, ಐಡಿ ಕಾರ್ಡ್ ಸೇರಿದಂತೆ ಮೂಲ ಸೌಕರ್ಯ ನೀಡಬೇಕು. ಕಚೇರಿ ಮತ್ತು ಕ್ಯಾಂಪ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತಿಂಗಳ ವೇತನ ಪಾವತಿ ಮಾಡಬೇಕು. ಹೊಸದಾಗಿ ಮಾಡುತ್ತಿರುವ ಕಾನೂನು ಬಾಹಿರವಾಗಿ 26 ದಿನಗಳ ವೇತನ ಪಾವತಿ ಮಾಡುವುದನ್ನು ತಕ್ಷಣ ನಿಲ್ಲಿಸಿ ಮೊದಲಿನಂತೆ ವೇತನ ಪಾವತಿ ಕೊಡಿ’ ಎಂದು ಮನವಿ ಮಾಡಿದರು.

ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಅಧ್ಯಕ್ಷ ಕೆ. ನಾಗಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ. ಬಸವರಾಜ, ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ಅಜೀಜ್ ಜಾಗೀರದಾರ್, ಯರಮರಸ್ ವಿಭಾಗದ ಅಧ್ಯಕ್ಷ ಸಿದ್ದಪ್ಪಗೌಡ, ಪ್ರಹ್ಲಾದ್ ರಾವ್, ಜಿಲಾನಿಪಾಷ, ಜಗದೀಶ ಯಾರಗೇರಾ, ನಿಸಾರ್ ಅಹಮ್ಮದ್. ಲಕ್ಷ್ಮಣ, ಪರಶುರಾಮ, ನರಸಿಂಹ, ರಾಮಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.