ADVERTISEMENT

ಮಾರ್ಗಸೂಚಿ ಪಾಲನೆ ಅಗತ್ಯ: ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಸೂಚನೆ

ಲಾಕ್‌ಡೌನ್ ಮತ್ತಷ್ಟು ಸಡಿಲಿಕೆ ಇಂದು

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 5:47 IST
Last Updated 21 ಜೂನ್ 2021, 5:47 IST
ಲಿಂಗಸುಗೂರಿನ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಘಟಕದಲ್ಲಿ ಭಾನುವಾರ ಸೇವೆಗೆ ಸಿದ್ಧಗೊಂಡಿದ್ದ ಸಾರಿಗೆ ಬಸ್‌ಗಳು
ಲಿಂಗಸುಗೂರಿನ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಘಟಕದಲ್ಲಿ ಭಾನುವಾರ ಸೇವೆಗೆ ಸಿದ್ಧಗೊಂಡಿದ್ದ ಸಾರಿಗೆ ಬಸ್‌ಗಳು   

ರಾಯಚೂರು: ಜಿಲ್ಲೆಯಲ್ಲಿ ಪಾಸಿಟಿವ್ ದರ ಶೇ 5 ಕ್ಕಿಂತ ಕಡಿಮೆ ಇರುವ ಕಾರಣ ರಾಜ್ಯ ಸರ್ಕಾರ ಸೋಮವಾರದಿಂದ ಲಾಕ್ ಡೌನ್ ಸಡಿಲಿಕೆ ಆದೇಶ ನೀಡಿದ್ದು ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮ ಹಾಗೂ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ.

ಸೋಮವಾರದಿಂದ ಬೆಳಿಗ್ಗೆ 06ರಿಂದ ಸಂಜೆ 7ರವರೆಗೆ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ, ಸೇವೆಗಳು, ಕೃಷಿ ಚಟುವಟಿಕೆ, ಶೇ 50ರಷ್ಟು ಆಸನದ ಸಾಮರ್ಥ್ಯದೊಂದಿಗೆ ಸಾರಿಗೆ ಸಂಚಾರ ಆರಂಭಿಸಲು ಜಿಲ್ಲಾಡಳಿತ ಆದೇಶ ನೀಡಿದೆ.

ಹವಾನಿಯಂತ್ರಿತ ಅಂಗಡಿಗಳು, ಹವಾ ನಿಯಂತ್ರಿತ ಶಾಪಿಂಗ್ ಸಂಕೀರ್ಣಗಳು, ಮಾಲ್‌ಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿ, ಹೋಟೆಲ್‌ಗಳು, ಜಿಮ್‌ಗಳನ್ನು ತೆರೆಯಲು ಅವಕಾಶ ನೀಡಿದ್ದು ಶೇ 50 ರಷ್ಟು ಸಾಮರ್ಥ್ಯದ ಆಸನಗಳನ್ನು ಅಳವಡಿಸಬೇಕಿದೆ. ಬಾರ್ ರೆಸ್ಟೋರೆಂಟ್, ಕ್ಲಬ್‌ಗಳಲ್ಲಿ ಪಾರ್ಸಲ್ ವ್ಯವಸ್ಥೆಗೆ ತಿಳಿಸಿದ್ದು ಉಳಿದಂತೆ ವೈದ್ಯಕೀಯ ಸೇವೆ, ಪೆಟ್ರೋಲ್ ಬಂಕ್ ಹಾಗೂ ಇತರೆ ಅಗತ್ಯ ಸೇವೆ ಎಂದಿನಂತೆ ಲಭ್ಯ ವಿರಲಿದೆ.

ADVERTISEMENT

ಸಂಜೆ 7ರಿಂದ ಮರುದಿನ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಇರಲಿದ್ದು, ಶನಿವಾರ ಹಾಗೂ ಭಾನುವಾರ ವಾರಾಂತ್ಯದ ಕರ್ಫ್ಯೂ ಇರಲಿದ್ದು ಸಂಪೂರ್ಣ ಬಂದ್ ಮಾಡಲು ಆದೇಶಿಸಿದೆ. ಸೋಮವಾರ ಬಸ್ ಸಂಚಾರ ಆರಂಭ ಮಾಡುವ ಹಿನ್ನೆಲೆಯಲ್ಲಿ ಭಾನುವಾರ ನಗರದ ಕೇಂದ್ರ ಬಸ್ ನಿಲ್ದಾಣ ಹಾಗೂ ವಿವಿಧ ಬಸ್ ಡಿಪೋಗಳಲ್ಲಿ ಸ್ಯಾನಿಟೈಸ್ ಹಾಗೂ ಸ್ವಚ್ಛತೆ ಮಾಡಲಾಯಿತು.

ಭಾನುವಾರ ಬೆಳಿಗ್ಗೆ ನಗರದಲ್ಲಿ ಬೇಕಾಬಿಟ್ಟಿ ಸಂಚರಿಸಿದ ವಾಹನ ಸವಾರರನ್ನು ನಿಲ್ಲಿಸಿ ವಿಚಾರಿಸಿದ ಪೊಲೀಸರು ಸಂಜೆ ಹಲವೆಡೆ ಅಳವಡಿಸಿದ ಬ್ಯಾರಿಕೇಡ್‌ಗಳನ್ನು ತೆರವು ಮಾಡಿದರು.

ಲಾಕ್‌ಡೌನ್ ಸಡಿಲಿಕೆಯ ನೆಪವಾಗಿಟ್ಟುಕೊಂಡು ಬೇಕಾಬಿಟ್ಟಿಯಾಗಿ ವರ್ತಿಸದೇ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವುದು ಕಡ್ಡಾಯ. ಸಾರ್ವಜನಿಕರು ನಿಯಮ ಪಾಲನೆಗೆ ಮುಂದಾಗಿ ಕೋವಿಡ್ ಹತೋಟಿಗೆ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.