ADVERTISEMENT

ಸಿಂಧನೂರು: ಯೋಜನೆ ಪ್ರಾಧಿಕಾರ ಈಗ ನಗರಾಭಿವೃದ್ಧಿ ಪ್ರಾಧಿಕಾರ

ಡಿಸೆಂಬರ್ 21, 2000ರಲ್ಲಿ ನಗರ ಯೋಜನಾ ಪ್ರಾಧಿಕಾರ ಘೋಷಿಸಿದ್ದ ಸರ್ಕಾರ

ಡಿ.ಎಚ್.ಕಂಬಳಿ
Published 12 ಜನವರಿ 2025, 4:59 IST
Last Updated 12 ಜನವರಿ 2025, 4:59 IST
ಸಿಂಧನೂರು ನಗರ ಯೋಜನಾ ಪ್ರಾಧಿಕಾರದ ಕಚೇರಿ
ಸಿಂಧನೂರು ನಗರ ಯೋಜನಾ ಪ್ರಾಧಿಕಾರದ ಕಚೇರಿ   

ಸಿಂಧನೂರು:  ನಗರ ಯೋಜನಾ ಪ್ರಾಧಿಕಾರವನ್ನು ಸರ್ಕಾರ ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರವೆಂದು ಮೇಲ್ದರ್ಜೆಗೇರಿಸಿ ಆದೇಶ ನೀಡಿದೆ.

ಡಿಸೆಂಬರ್ 21, 2000ರಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4(ಎ–1) ರಡಿಯಲ್ಲಿ ಪ್ರದತ್ತವಾದ ಅಧಿಕಾರದಿಂದ ಸಿಂಧನೂರು ಸ್ಥಳೀಯ ಯೋಜನಾ ಪ್ರದೇಶದಲ್ಲಿನ ಪಟ್ಟಣ ಮತ್ತು ಸುತ್ತಮುತ್ತಲಿನ 21 ಗ್ರಾಮಗಳಿಗೆ ಸೀಮಿತಗೊಳಿಸಿ ನಗರ ಯೋಜನಾ ಪ್ರಾಧಿಕಾರ ಎಂದು ಘೋಷಿಸಲಾಗಿತ್ತು.

ಸಿಂಧನೂರು ತಾಲ್ಲೂಕು ಕೇಂದ್ರ ಸ್ಥಾನವಾಗಿದ್ದು, ಪಟ್ಟಣದ ಯೋಜನಾಬದ್ಧ ಬೆಳವಣಿಗೆಯ ಉದ್ದೇಶದಿಂದ ಹಾಗೂ ಪಟ್ಟಣದ ವ್ಯಾಪ್ತಿಯಲ್ಲಿನ ಅಭಿವೃದ್ಧಿಗಳನ್ನು ನಿಯಂತ್ರಿಸಲು ಸಿಂಧನೂರು ಯೋಜನಾ ಪ್ರದೇಶವನ್ನು ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರವನ್ನಾಗಿ ಮೇಲ್ದರ್ಜೆಗೇರಿಸಿ ನಗರಾಭಿವೃದ್ಧಿ ಇಲಾಖೆಯ ಅಭಿವೃದ್ಧಿ ಪ್ರಾಧಿಕಾರದ ಅಧೀನ ಕಾರ್ಯದರ್ಶಿ ಲತಾ.ಕೆ. ಅವರು ಆದೇಶ ಹೊರಡಿಸಿದ್ದಾರೆ. ಜನವರಿ 10 ರಿಂದ ಈ ಆದೇಶ ಜಾರಿಗೆ ಬಂದಿರುವುದಾಗಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ‘ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರ’ದ ಆದೇಶ ಹೊರಬೀಳುತ್ತಿದ್ದಂತೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. ಕಳೆದ ಒಂದು ವರ್ಷದಿಂದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ದೊಡ್ಡನಗೌಡ ಕಲ್ಲೂರು ಅವರಿಗೆ ನಗರಾಭಿವೃದ್ಧಿ ಪ್ರಾಧಿಕಾರವಾಗಿ ಮಾರ್ಪಟ್ಟಿರುವುದರಿಂದ ಮತ್ತಷ್ಟೂ ಆಸೆ ಚಿಗುರಿದಂತಾಗಿದೆ.
ಆದರೆ ಐದು ತಿಂಗಳ ಹಿಂದೆ ವರ್ತಕರ ಸಂಘದ ಅಧ್ಯಕ್ಷರಾಗಲು ದೊಡ್ಡನಗೌಡರಿಗೆ ಶಾಸಕ ಹಂಪನಗೌಡ ಬಾದರ್ಲಿ ಸಹಾಯ ಮಾಡಿರುವುದರಿಂದ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಅವರು ಕೇಳುವುದಿಲ್ಲ ಎನ್ನುತ್ತಾರೆ ಹಂಪನಗೌಡರ ಆಪ್ತರು.

ಮೂರು ದಶಕದಿಂದ ಯಾವುದೇ ಅಧಿಕಾರ ಬಯಸದೆ ಹಂಪನಗೌಡರು ಸ್ಪರ್ಧಿಸಿದ ಪ್ರತಿಯೊಂದು ಚುನಾವಣೆಯಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಎಂ.ಅಮರೇಗೌಡ ವಕೀಲ ಅವರನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಒತ್ತಾಯಿಸಿರುವುದಾಗಿ ಹೆಸರು ಬಹಿರಂಗಪಡಿಸಲು ಇಚ್ಚಿಸದ ಪಕ್ಷದ ಹಿರಿಯರೊಬ್ಬರು ಹೇಳಿದರು.

1989ರಿಂದ ಹಂಪನಗೌಡರ ಬೆಂಗಾವಲಾಗಿ ದುಡಿದಿರುವ ಮಲ್ಲನಗೌಡ ಕಾನ್ಯಾಳ ಅವರನ್ನು ನೇಮಕ ಮಾಡುವಂತೆ ಗಂಜ್ ವರ್ತಕರು ಹಂಪನಗೌಡರ ಮೇಲೆ ಪ್ರಭಾವ ಬೀರಿದ್ದಾರೆ ಎನ್ನಲಾಗಿದೆ.

ನಗರಸಭೆ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಪಾಟೀಲ ಮತ್ತು ಸೈಯದ್ ಜಾಫರ್ ಜಾಗೀರದಾರ್ ಅವರಲ್ಲಿ ಯಾರಾದರೊಬ್ಬರನ್ನು ನೇಮಕ ಮಾಡಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು ಮತ್ತು ದಲಿತರೇ ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕಿರುವುದರಿಂದ ಈ ಎರಡು ಸಮುದಾಯಗಳಿಗೆ ಆದ್ಯತೆ ಕೊಡಬೇಕೆಂದು ಹಿಂದುಳಿದ ವರ್ಗದ ನಾಯಕರ ಅನಿಸಿಕೆಯಾಗಿದೆ.

ನಗರ ಯೋಜನೆ ಪ್ರಾಧಿಕಾರವನ್ನು ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರವನ್ನಾಗಿ ಮೇಲ್ದರ್ಜೆಗೆರಿಸಲು ಶಾಸಕ ಹಂಪನಗೌಡ ಬಾದರ್ಲಿ ಶ್ರಮಿಸಿದ್ದಾರೆ. ಅವರು ಅಧ್ಯಕ್ಷರ ನೇಮಕದ ಕುರಿತು ಅವಸರದ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಸೂಕ್ತ ವ್ಯಕ್ತಿಯನ್ನು ನೇಮಕ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ
ಮಲ್ಲಿಕಾರ್ಜುನ ಪಾಟೀಲ ಮಾಜಿ ಅಧ್ಯಕ್ಷ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.