ADVERTISEMENT

ಬಾಕಿ ವೇತನ, ಅಂಗನವಾಡಿ ಕೇಂದ್ರಗಳ ಬಾಡಿಗೆ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 12:23 IST
Last Updated 11 ಜೂನ್ 2019, 12:23 IST

ರಾಯಚೂರು: ಮೂರು ತಿಂಗಳ ಬಾಕಿ ವೇತನ, ಅಂಗನವಾಡಿ ಕೇಂದ್ರಗಳ ಬಾಡಿಗೆ ಹಣ ಬಿಡುಗಡೆ ಹಾಗೂ ಮೇ 20 ರಂದು ನಡೆದ ಜಿಲ್ಲಾಮಟ್ಟದ ಕುಂದು ಕೊರತೆ ಸಭೆಯ ತೀರ್ಮಾನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಪದಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ನೌಕರರ ವೇತನ, ಕೇಂದ್ರಗಳ ಬಾಡಿಗೆ ಹಣವನ್ನು ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಬಿಡುಗಡೆ ಮಾಡಬೇಕು. ಉತ್ತಮ ಮತ್ತು ಗುಣಮಟ್ಟದ ಪೌಷ್ಟಿಕ ಆಹಾರವನ್ನು ನೌಕರರ ಇಂಡೆಂಟ್‌ ಪ್ರಕಾರ ಪೂರೈಸಬೇಕು. ಕಾರ್ಯಕರ್ತೆಯರಂತೆ ಸಹಾಯಕಿಯರ ಸಭೆಯನ್ನು ಮೂರು ತಿಂಗಳಿಗೊಮ್ಮೆ ನಡೆಸಬೇಕು ಎಂದು ಮನವಿ ಮಾಡಿದರು.

ಭಾಗ್ಯಲಕ್ಷ್ಮೀ, ಮಾತೃಶ್ರೀ ಹಾಗೂ ಮಾತೃವಂದನಾ ಅರ್ಜಿಗಳನ್ನು ಕಾರ್ಯಕರ್ತೆಯರಿಂದ ಪಡೆದು ಮೇಲ್ವಿಚಾರಕಿಯರು ಸ್ವೀಕೃತಿ ನೀಡಬೇಕು. 2006ರಿಂದ ಭಾಗ್ಯಲಕ್ಷ್ಮೀ ಫಲಾನುಭವಿಗಳ ಮಕ್ಕಳಿಗೆ 13 ವರ್ಷಗಳಿಂದ ಬಾಕಿಯಿರುವ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಶೈಕ್ಷಣಿಕ ವರ್ಷ ಜೂನ್‌ನಿಂದ ಆರಂಭಗೊಳ್ಳುವುದರಿಂದ ವೇತನ ದೊರೆಯದ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ಕೇಂದ್ರಗಳಿಗೂ ಪ್ರತಿ ತಿಂಗಳು ಬಾಡಿಗೆ ನೀಡಬೇಕು. ಇಲ್ಲದಿದ್ದರೆ ಬಾಡಿಗೆ ಬಿಡಬೇಕೆಂದು ಮಾಲೀಕರು ಹೇಳುತ್ತಿದ್ದಾರೆ. ಆದ್ದರಿಂದ ಮೇ 20 ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಜಾರಿಗೊಳಿಸಬೇಕು ಎಂದರು.

ಸೇವೆಯಲ್ಲಿ ಮರಣರಾದವರಿಗೆ ₹50 ಸಾವಿರ ಪರಿಹಾರ ನೀಡಬೇಕು ಎಂಬ ಆದೇಶವಿದ್ದರೂ, ಅರ್ಜಿ ಸಲ್ಲಿಸಿದ ನಾಲ್ಕು ಜನರಿಗೂ ಪರಿಹಾರ ನೀಡಿಲ್ಲ. ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸದಿದ್ದರೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಘಟಕ ಅಧ್ಯಕ್ಷೆ ಎಚ್‌.ಪದ್ಮಾ, ಪಾರ್ವತಿ ಮನ್ಸಲಾಪುರ, ಗೋಕರಮ್ಮ, ಪಾರ್ವತಿ ಸಿಯಾತಲಾಬ್, ರಾಘಮ್ಮ, ಮಮತಾ, ಶರಣಬಸವ, ರೇಣುಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.