ADVERTISEMENT

ಗಬ್ಬೂರಿನಿಂದ ಡಿಸಿ ಕಚೇರಿ ತಲುಪಿದ ಪಾದಯಾತ್ರೆ

ದೇವದುರ್ಗದಲ್ಲಿ ಶೈಕ್ಷಣಿಕ ಸೌಲಭ್ಯ, ಹಕ್ಕು ಪತ್ರ ವಿತರಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 13:16 IST
Last Updated 11 ಜೂನ್ 2019, 13:16 IST
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದಿಂದ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮಾಡಿಕೊಂಡು ಬಂದಿದ್ದ ಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದಿಂದ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮಾಡಿಕೊಂಡು ಬಂದಿದ್ದ ಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು   

ರಾಯಚೂರು: ಜಿಲ್ಲೆಯದೇವದುರ್ಗ ತಾಲ್ಲೂಕಿನಲ್ಲಿ ಶೈಕ್ಷಣಿಕ ಸೌಲಭ್ಯ, ನಿವೇಶನ ಹಾಗೂ ಹಕ್ಕು ಪತ್ರ ವಿತರಿಸಲು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಗಬ್ಬೂರು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮೂಲಕ ಬಂದಿದ್ದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಜೂನ್‌ 10ರಂದು ಪಾದಯಾತ್ರೆ ಆರಂಭಿಸಿದ ಪ್ರತಿಭಟನಾಕಾರರು, ಮಂಗಳವಾರ ನಗರದ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ನಗರಸಭೆಯಿಂದ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನೆ ನಡೆಸಿದರು.

ಗಬ್ಬೂರಿನ ಸರ್ವೆ ನಂಬರ್ 893ರಲ್ಲಿ ಸರ್ಕಾರಿ ನಿವೇಶನದಲ್ಲಿ ಮೋರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ ಮಾಡಿ, ಹದ್ದುಬಸ್ತು ಮಾಡಬೇಕು. ಇದಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕರಡಿಗುಡ್ಡ ಗ್ರಾಮದ ಸರ್ಕಾರಿ ಶಾಲೆಗೆ 2 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಹೊನ್ನಟಗಿ, ಲಿಂಗದಳ್ಳಿಯ ದಲಿತರಿಗೆ ನಿವೇಶನ ಹಕ್ಕು ಪತ್ರ ವಿತರಿಸಬೇಕು. ಹೇರುಂಡಿ, ವೀರಗೋಟದಲ್ಲಿ ನೆನೆಗುದಿಗೆ ಬಿದ್ದ ಮನೆಗಳನ್ನು ವಿತರಿಸಬೇಕು, ಚಿಂಚೋಡಿ ಗ್ರಾಮದ ಸರ್ಕಾರಿ ಪ್ರೌಢಶಶಾಲೆ, ಸರ್ಕಾರಿ ಆಸ್ಪತ್ರೆಯ ರಸ್ತೆಯನ್ನು ವಿಸ್ತರಣೆ ಮಾಡಬೇಕು ಎಂದರು.

ಕನ್ಯಾ ಪ್ರೌಢಶಾಲೆ ಹಾಗೂ ಪದವಿ ಕಾಲೇಜು ಮಂಜೂರು ಮಾಡಬೇಕು. ಖಾನಾಪೂರದ ಶಾಲೆ, ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು. ಹೇಮನಾಳ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯ ಒದಗಿಸಿ, ಪಿಡಿಒ ವಿರುದ್ಧ ಕ್ರಮ ಜರುಗಿಸಬೇಕು. ಮಲದಕಲ್‌ನ ಪರಿಶಿಷ್ಟ ಜಾತಿ ಕಾಲೊನಿಗೆ ಶುದ್ಧ ಕುಡಿವ ನೀರು ಪೂರೈಸಬೇಕು. ಮಹಿಳೆಯರಿಗೆ ಹೈಟೆಕ್ ಶೌಚಾಲಯ ನಿರ್ಮಿಸಬೇಕು. ಕಾಕರಗಲ್ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶುದ್ಧ ನೀರು, ಶೌಚಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಜೆ.ಬಿ.ರಾಜು, ಎಂ.ಆರ್.ಭೇರಿ, ಹೇಮರಾಜ ಅಸ್ಕಿಹಾಳ, ಶಾಂತಕುಮಾರ ಹೊನ್ನಟಗಿ, ಮೇಲಪ್ಪ ಬಾವಿಮನಿ, ರಾಜಪ್ಪ ಸಿರವಾರಕರ್, ಬಸವರಾಜ ಸೂರಿ, ಜಾಕೋಬ, ಹನುಮಂತ ಗಣೇಕಲ್, ಭೀಮಣ್ಣ, ಹನುಮಂತ ಸಿಂಗ್ರಿ, ನರಸಪ್ಪ, ಈಶಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.