ADVERTISEMENT

ನಾಡಗೌಡರನ್ನು ಸಚಿವ ಸಂಪುಟದಿಂದ ಕೈಬಿಡಲು ಒತ್ತಾಯ

ಸಿಪಿಐ, ಪಿಎಸ್‌ಐ ಅಮಾನತು ರದ್ದುಪಡಿಸಲು ಆಗ್ರಹಿಸಿ ಟಿಯುಸಿಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 13:57 IST
Last Updated 1 ಜುಲೈ 2019, 13:57 IST
ರಾಯಚೂರಿನಲ್ಲಿ  ಟಿಯುಸಿಐ ಸಂಘಟನೆ ಸದಸ್ಯರು ಪೊಲೀಸ್ ಅಧಿಕಾರಿಗಳ ಅಮಾನತು ರದ್ದುಪಡಿಸಿ, ವೆಂಕಟರಾವ್‌ ನಾಡಗೌಡರನ್ನು ಸಚಿವ ಸಂಪುಟದಿಂದ ಕೈಬಿಡಲು ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ  ಟಿಯುಸಿಐ ಸಂಘಟನೆ ಸದಸ್ಯರು ಪೊಲೀಸ್ ಅಧಿಕಾರಿಗಳ ಅಮಾನತು ರದ್ದುಪಡಿಸಿ, ವೆಂಕಟರಾವ್‌ ನಾಡಗೌಡರನ್ನು ಸಚಿವ ಸಂಪುಟದಿಂದ ಕೈಬಿಡಲು ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಯರಗೇರಾ ಸಿಪಿಐ ದತ್ತಾತ್ರೇಯ ಕಾರ್ನಾಡ್‌ ಹಾಗೂ ಗ್ರಾಮೀಣ ಠಾಣೆ ಪಿಎಸ್‌ಐ ನಿಂಗಪ್ಪ ಅವರ ಅಮಾನತು ಆದೇಶವನ್ನು ರದ್ದುಪಡಿಸಬೇಕು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ ನಾಡಗೌಡ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಟ್ರೇಡ್‌ ಯುನಿಯನ್‌ ಸೆಂಟರ್‌ ಆಫ್‌ ಇಂಡಿಯಾ (ಟಿಯುಸಿಐ) ಸಂಘಟನೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಸೋಮವಾರ ಪ್ರತಿಭಟನೆ ನಡೆಸಿದರು.

ಮಾನ್ವಿ ತಾಲ್ಲೂಕಿನ ಕರೇಗುಡ್ಡಕ್ಕೆ ಗ್ರಾಮ ವಾಸ್ತವ್ಯಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಂದಿದ್ದ ಸಂದರ್ಭದಲ್ಲಿ ಟಿಯುಸಿಐ ಸಂಯೋಜಿತ ಕಾರ್ಮಿಕ ಸಂಘಟನೆಗಳಿಂದ ಕಾರ್ಮಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ದಿಢೀರನೆ ಪ್ರತಿಭಟನೆ ಮಾಡಲಾಗಿದೆ. ಆದರೆ, ಕರ್ತವ್ಯ ಲೋಪದಡಿ ಇಬ್ಬರ ಪೊಲೀಸ್ ಅಧಿಕಾರಿಗಳನ್ನು ಬಳ್ಳಾರಿ ವಲಯದ ಐಜಿಪಿ ಅಮಾನತುಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದರು.

ಕಾರ್ಮಿಕರ ಸಮಸ್ಯೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರಲು ಜಿಲ್ಲಾಡಳಿತ ಅವಕಾಶ ಕಲ್ಪಿಸದೇ ನಿರ್ಬಂಧ ಹೇರಿತ್ತು. ಆದರೂ, ಮುಖ್ಯಮಂತ್ರಿಯ ಗಮನಕ್ಕೆ ಸಮಸ್ಯೆಗಳನ್ನು ತರಲು ಉದ್ದೇಶಿಸಲಾಗಿತ್ತು. ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವೈಫಲ್ಯದಿಂದ ಈ ಸಮಸ್ಯೆಯಾಗಿದ್ದು, ವಿನಾಕಾರಣ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಖಂಡಿಸಿದರು.

ADVERTISEMENT

ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ 14ತಿಂಗಳ ಬಾಕಿ ವೇತನ ಪಾವತಿಸಬೇಕು ಹಾಗೂ ವೈಟಿಪಿಎಸ್‌ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಟಿಯುಸಿಐ ಜಿಲ್ಲಾ ಅಧ್ಯಕ್ಷ ಜಿ.ಅಮರೇಶ, ರಾಮರೆಡ್ಡಿ, ರವಿ, ಮಲ್ಲಯ್ಯಸ್ವಾಮಿ, ರವಿದಾದಾಸ್, ಕೆ.ರವಿ, ಉಸ್ಮಾನ ಅಲಿ, ಕಲ್ಲೂರಪ್ಪ, ನಾಗೇಶ, ಶಿವರಾಜ, ವಿಜಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.