ADVERTISEMENT

ನರೇಗಾ ಯೋಜನೆಯಡಿ ಭ್ರಷ್ಟಾಚಾರ: ತನಿಖೆಗೆ ಒತ್ತಾಯ 

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 10:21 IST
Last Updated 3 ಡಿಸೆಂಬರ್ 2022, 10:21 IST

ರಾಯಚೂರು: ಜಿಲ್ಲೆಯ ಸಿರವಾರ ತಾಲ್ಲೂಕಿನ ಬಾಗಲವಾಡ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಲ್ಲಿ ಅವ್ಯವಹಾರ, ಅನುದಾನ ದುರುಪಯೋಗವಾಗಿದ್ದು, ತಾಲ್ಲೂಕು ಪಂಚಾಯಿತಿ ಮುಖ್ಯ ಅಧಿಕಾರಿ ಉಮೇಶ, ಬಾಗಲವಾಡ ಗ್ರೇಡ್ 2 ಪಿಡಿಒ ವಿನೋದರಾಜ, ಡಿಇಒ ನಾಗರಾಜ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ನಿರುಪಾದಿ ಗೋಮರ್ಸಿ ಒತ್ರಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಡಿಯಲ್ಲಿ ಸಿಸಿ ರಸ್ತೆಗಳು, ಚರಂಡಿಗಳು ಶಾಲಾ ಕಂಪೌಂಡ್‌ಗಳು ಹಾಗೂ 14 ಮತ್ತು 15ನೇ ಹಣಕಾಸು ಯೋಜನೆ ದುರುಪಯೋಗ ಪಡಿಸಿಕೊಳ್ಳಲಾಗಿದೆ. ನರೇಗಾ ಯೋಜನೆಯಡಿಯಲ್ಲಿ ಕಾಮಗಾರಿ ಮಾಡದೇ ಬೋಗಸ್ ಬಿಲ್ ಸೃಷ್ಟಿಸಿ ಭ್ರಷ್ಟಾಚಾರ ಎಸಗಿದ್ದಾರೆ ಎಂದರು.

ಭ್ರಷ್ಟಾಚಾರದ ಬಗ್ಗೆ ಹಿಂದಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೂರ್ ಜಹಾರ ಖಾನಂ ಅವರು 60 ದಿನಗಳಲ್ಲಿ ಇಲಾಖಾ ವಿಚಾರಣೆ ನಡೆಸಲು ಆದೇಶ ಮಾಡಿ ಆರು ತಿಂಗಳ ಗತಿಸಿದರೂ ಅವರ ವಿರುದ್ದ ವಿಚಾರಣೆ ಮಾಡಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಾಗೂ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದೇವೆ ಎಂದರು.

ADVERTISEMENT

ಭ್ರಷ್ಟಾಚಾರದ ಬಗ್ಗೆ ಉನ್ನತ ತನಿಖೆ ನಡೆಸಿ ಭ್ರಷ್ಟಾಚಾರದ ಹಣ ಮರಳಿ ಸರ್ಕಾರದ ಖಾಜಾನೆಗೆ ಪಾವತಿಸಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಧರಣಿ ನಡೆಸಲಾಗುವುದು ಎಂದು ಒತ್ತಾಯಿಸಿದರು.

ಪಕ್ಷದ ಮುಖಂಡರಾದ ಪಂಪಣ್ಣ ಚಾಟಿ, ಶರಣಪ್ಪ ಹಂಚಿನಾಳ, ಚನ್ನಬಸಪ್ಪ, ಸಿದ್ರಾಮಪ್ಪ, ದೇವಣ್ಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.