ADVERTISEMENT

ಗಂಗಮ್ಮ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 13:16 IST
Last Updated 8 ಏಪ್ರಿಲ್ 2020, 13:16 IST

ರಾಯಚೂರು: ಬೆಂಗಳೂರಿನಿಂದ ವಾಪಸಾಗುವಾಗ ಬಳಲಿ, ಊಟೋಪಚಾರವಿಲ್ಲದೆ ಮೃತಪಟ್ಟಿರುವ ಗಂಗಮ್ಮನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ರಾಜ್ಯ ಸಮಿತಿ ಹಾಗೂ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯುನಿಯನ್‌ (ಸಿಐಟಿಯು) ಜಿಲ್ಲಾ ಸಮಿತಿ ಒತ್ತಾಯಿಸಿವೆ.

ಜನರನ್ನು ವಿದೇಶದಿಂದ ಕರೆಸಿಕೊಳ್ಳಲು ಸರ್ಕಾರ ವಿಮಾನ ಹಾಗೂ ಇತರೆ ಸಾರಿಗೆ ವ್ಯವಸ್ಥೆ ಮಾಡುತ್ತದೆ. ಇನ್ನೊಂದೆಡೆ ಬಡವರಿಗೆ ಕಾರ್ಮಿಕರಿಗೆ ಯಾವೊಂದು ವ್ಯವಸ್ಥೆಯನ್ನೂ ಮಾಡದೇ ನಿರ್ಲಕ್ಷ್ಯ ತೋರಿದೆ. ಇದರಿಂದಾಗಿ ದುಡಿಯುವ ಅಮೂಲ್ಯ ಜೀವವೊಂದು ಬಲಿಯಾಗಬೇಕಾಗಿ ಬಂದುದು ಅಮಾನುಷವೂ, ದುರಂತವೇ ಸರಿ ಎಂದು ತಿಳಿಸಿದೆ.

ಅತಂತ್ರದಲ್ಲಿರುವ ಎಲ್ಲಾ ಬಡವರನ್ನು ಅವರವರ ಊರು, ಕೇರಿಗೆ ಸುರಕ್ಷಿತವಾಗಿ ತಲುಪಿಸುವ, ಬಡಜನರಿಗೆ ಸಮರ್ಪಕ ಪಡಿತರವನ್ನು ಕೂಡಲೇ ತಲುಪುವಂತೆ ಕ್ರಮ ಜರುಗಿಸಬೇಕೆಂದು ಎಐಯುಟಿಯುಸಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸೋಮಶೇಖರ್‌ ಒತ್ತಾಯಿಸಿದ್ದಾರೆ.

ADVERTISEMENT

ಗಂಗಮ್ಮನ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. ದುಡಿದ ಹಣವನ್ನು ಕೊಡದೆ ವಂಚಿಸಿರುವ ಬೆಂಗಳೂರಿನ ಅಪಾರ್ಟ್‌ಮೆಂಟ್‌ ಮಾಲೀಕನ ವಿರುದ್ದವೂ ಕ್ರಮ ಕೈಗೊಳ್ಳಬೇಕು ಎಂದು ಸಿಐಟಿಯು ಜಿಲ್ಲಾ ಸಮಿತಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಡಿ.ಎಸ್‌. ಶರಣಬಸವ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.