ADVERTISEMENT

ಮಂಗಳೂರು ಗೋಲಿಬಾರ್ ಪ್ರಕರಣ: ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 12:38 IST
Last Updated 4 ಜನವರಿ 2020, 12:38 IST

ರಾಯಚೂರು: ಸಿಎಎ ಮತ್ತು ಎನ್‌ಪಿಆರ್ ವಿರುದ್ಧಮಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್‌ನಲ್ಲಿ ಹಲವು ಜನರು ಗಾಯಗೊಂಡಿದ್ದು, ಇಬ್ಬರು ಬಲಿಯಾಗಿರುವ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 150 ರಷ್ಟು ಪ್ರತಿಭಟನಾಕಾರರ ಮೇಲೆ ವಿನಾಕಾರಣ ದೌರ್ಜನ್ಯ ನಡೆಸಿದ ಪೊಲೀಸರ ಕ್ರಮ ಎಲ್ಲಾ ಅನಾಹುತಗಳಿಗೆ ಕಾರಣ. ಗಂಭೀರ ಗಾಯಗೊಂಡ ಹಲವು ಮಂದಿ ಮಂಗಳೂರು ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯೊಳಗೆ ಆಶ್ರುವಾಯು ಸಿಡಿಸಿರುವುದು ಹಾಗೂ ಪೊಲೀಸರು ಆಸ್ಪತ್ರೆಯ ಐಸಿಯು ಘಟಕದ ಬಾಗಿಲನ್ನು ಮುರಿದು ಒಳ ನುಗ್ಗಿ ಅಲ್ಲಿದ್ದ ವೈದ್ಯರು, ನರ್ಸ್‌ಗಳಿಗೂ ಲಾಠಿ ಬೀಸಿರುವುದು ಕೂಡಾ ಮಂಗಳೂರಿನ ಪೊಲೀಸರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಪೊಲೀಸರ ಕ್ರೌರ್ಯ ಮನಸ್ಥಿತಿ ಎಷ್ಟು ಮಿತಿಮೀರಿದೆ ಎನ್ನುವುದಕ್ಕೆ ಸಂಬಂಧಪಟ್ಟ ಕೆಲವು ವಿಡಿಯೋ ದೃಶ್ಯಗಳೇ ಸಾಕ್ಷಿ ಎಂದರು.

ಈ ಘಟನೆಗೆ ಕಾರಣರಾದ ಪೊಲೀಸ್ ಅಧಿಕಾರಿ ಹರ್ಷ ಗುಪ್ತರನ್ನು ಸೇವೆಯಿಂದ ತಕ್ಷಣ ವಜಾಗೊಳಿಸುವಂತೆ ಆಗ್ರಹಿಸಿದರು.

ADVERTISEMENT

ಸಿಎಎ, ಎನ್ಆರ್‌ಸಿ ಹಾಗೂ ಎನ್‌ಪಿಆರ್‌ ಕಾಯ್ದೆಗಳನ್ನು ಬಹಿಷ್ಕರಿಸುತ್ತೇವೆ. ಈ ಎಲ್ಲಾ ನಿರ್ಧಾರಗಳನ್ನು ಸರ್ಕಾರ ಹಿಂಪಡೆಯುವವರೆಗೂ ನಾಗರಿಕ ಸಮಾಜದಿಂದ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.

ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಮೊಹ್ಮದ್ ಅಬ್ದುಲ್ ಮತೀನ್ ಅನ್ಸಾರಿ, ಕೆ.ರಾಜೇಶ ಕುಮಾರ, ಎಂ.ಈರಣ್ಣ, ಬಸವರಾಜ ಭಂಡಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.