ADVERTISEMENT

ರಾಯಚೂರು | ಪರಿಶಿಷ್ಟ ಜಾತಿಯಿಂದ ಸ್ಪೃಶ್ಯ ಜಾತಿಗಳನ್ನು ಕೈಬಿಡಿ : ಎ.ವಸಂತಕುಮಾರ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 13:46 IST
Last Updated 24 ಜುಲೈ 2020, 13:46 IST

ರಾಯಚೂರು: ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸ್ಪೃಶ್ಯ ಜಾತಿಗಳನ್ನು ಸೇರಿಸಿದ ಕಾರಣ ಮೂಲ ಜಾತಿಗಳಿಗೆ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದ್ದು, ಈ ಜಾತಿಪಟ್ಟಿಯಿಂದ ಕೈಬಿಡಲು ಒತ್ತಾಯಿಸಿ ಸಮುದಾಯದ ಮುಖಂಡರು ಪಕ್ಷಾತೀತವಾಗಿ ಹೋರಾಟಕ್ಕೆ ಮುಂದಾಗಿದ್ದೇವೆ. ಸಮಾಜದ ಶಾಸಕರು ಕೈ ಜೋಡಿಸಲು ಒತ್ತಾಯಿಸಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಸಮಾಜದ ಮುಖಂಡ ಎ.ವಸಂತಕುಮಾರ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ಪೃಶ್ಯ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಈ ಹಿಂದೆ ಆದ ರಾಜಕೀಯ ಎಡವಟ್ಟಿನಿಂದಾಗಿ ಸ್ಪೃಶ್ಯ ಸಮಾಜ ಮಿಸಲಾತಿ ಪಡೆಯುತ್ತಿದ್ದಾರೆ. ಅಸ್ಪೃಶ್ಯರು ಈವರೆಗೂ ಸಾಮಾಜಿಕ ಸ್ಥಾನಮಾನ, ಧಾರ್ಮಿಕ ಹಕ್ಕಿನಿಂದ ವಂಚಿತರಾಗಿದ್ದಾರೆ. ಇತರೆ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸದ ಸ್ಪೃಶ್ಯ ಜಾತಿಗಳನ್ನು ಕರ್ನಾಟಕ ರಾಜ್ಯದಲ್ಲಿ ಮಾತ್ರ ಸೇರಿಸಲಾಗಿದೆ ಎಂದರು.

ಸುಪ್ರೀಕೋರ್ಟ್ ನ ಇತ್ತೀಚಿನ ನಿರ್ದೇಶನದಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸ್ಪೃಶ್ಯ ಜಾತಿಗಳನ್ನು ಸೇರಿಸಿದ ಮಾಹಿತಿ ನೀಡಲು ಹೇಳಿದ್ದು ಸರ್ಕಾರ ವರದಿ ಸಲ್ಲಿಸಬೇಕು. ಈ ಬಗ್ಗೆ ಸಮುದಾಯದ ಮುಖಂಡರು ಚರ್ಚಿಸಿ ಜನಾಂದೋಲನ ರೂಪಿಸಿದ್ದು ಜನಪ್ರತಿನಿಧಿಗಳು ಹೋರಾಟಕ್ಕೆ ಕೈಜೋಡಿಸಲಿದ್ದಾರೆ ಎಂದು ಹೇಳಿದರು.

ADVERTISEMENT

ಅಸೃಶ್ಯ ಸಮಾಜಗಳ ಮಹಾಸಭಾದ ಸಂಚಾಲಕ ವಿರೂಪಾಕ್ಷಿ ಮಾತನಾಡಿ, ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪೃಶ್ಯ ಜಾತಿಗಳಾದ ಬಂಜಾರ, ಭೋವಿ, ಕೊರಮ, ಕೊಂಚಮ ಜಾತಿಗಳನ್ನು ತೆಗೆದುಹಾಕಬೇಕು ಎಂದು ಈಗಾಗಲೇ ಸಮುದಾಯದ ಮುಖಂಡರಿಂದ ಎರಡು ಹಂತಗಳ ಹೋರಾಟ ಮಾಡಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದರು.

ಮೂರನೇ ಹಂತದ ಹೋರಾಟಕ್ಕೆ ಮುಂದಾಗಿದ್ದು, ಆಗಸ್ಟ್ 5 ರಂದು ಆಯಾ ಗ್ರಾಮ ಪಂಚಾಯಿತಿಗಳ ಮುಂದೆ ಧರಣಿ ನಡೆಸಿ ಪಿಡಿಒ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಮುಂದೆ ಸಮಾಜದ ಐಎಎಸ್, ಕೆಎಎಸ್ ಅಧಿಕಾರಿಗಳು, ಸ್ವಾಮೀಜಿಗಳ ನೇತೃತ್ವದಲ್ಲಿ ಡಿಸೆಂಬರ್ 6 ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಪದಾಧಿಕಾರಿ ರವೀಂದ್ರ ನಾಥ ಪಟ್ಟಿ, ರವೀಂದ್ರ ಜಾಲ್ದಾರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.