ADVERTISEMENT

ಬಿ.ರಮೇಶಗೆ ನಗರಸಭೆ ಉಪಾಧ್ಯಕ್ಷ ಸ್ಥಾನ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 12:09 IST
Last Updated 18 ಮಾರ್ಚ್ 2020, 12:09 IST
ರವೀಂದ್ರನಾಥ
ರವೀಂದ್ರನಾಥ   

ರಾಯಚೂರು: ರಾಯಚೂರು ನಗರಸಭೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಈ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಛಲವಾದಿ ಸಮಾಜದ ಬಿ.ರಮೇಶ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಛಲವಾದಿ ಮಹಾಸಭಾ ಜಿಲ್ಲಾ ಸಮಿತಿಯ ಅಧ್ಯಕ್ಷ ರವೀಂದ್ರನಾಥ ಪಟ್ಟಿ ಒತ್ತಾಯಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು ನಗರಸಭೆಯಲ್ಲಿ ಮೀಸಲಾತಿ ನಿಗದಿಯಾದಾಗಿನಿಂದ ಪರಿಶಿಷ್ಟ ಜಾತಿಯ ಛಲವಾದಿ ಸಮಾಜಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಅವಕಾಶ ಮಾಡಲಿಲ್ಲ. ಈಗಲಾದರೂ ಪ್ರಸ್ತುತ ನಗರಸಭೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಕೋರಿದರು.

1983 ರಲ್ಲಿ ಕಾಂಗ್ರೆಸ್ ಪಕ್ಷ ಆರ್. ಆಂಜನೇಯಲು, 1992 ರಲ್ಲಿ ಎಂ. ಈರಣ್ಣ ಅವರನ್ನು ಅಧ್ಯಕ್ಷರಾಗಿ, 1998ರಲ್ಲಿ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿ ಪುನಾ 2003ರಲ್ಲಿ ಅಧ್ಯಕ್ಷರಾಗಿ ಮಾಡಲಾಗಿತ್ತು. ಮುಂದುವರೆದು ಮಮತಾ ಸುಧಾಕರ್, ಹೆಮಲತಾ ಬೂದೆಪ್ಪ ಅಧ್ಯಕ್ಷರು ಜಯಣ್ಣ ಉಪಾಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಕೇವಲ ಮಾದಿಗ ಸಮಾಜದ ಅಭ್ಯರ್ಥಿಗಳಿಗೆ ಮನ್ನಣೆ ನಿಡಲಾಗಿದೆ. ಪರಿಶಿಷ್ಟ ಜಾತಿಯ ಉಪಜಾತಿಗಳಿಗೆ ಸಮಾನ ಅವಕಾಶ ನೀಡದೇ ಛಲವಾದಿ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.

ADVERTISEMENT

ಕಾಂಗ್ರೆಸ್ ಪಕ್ಷದಲ್ಲಿ ಹಿಂದಿನಿಂದಲೂ ಛಲವಾದಿ ಸಮಾಜದ ಹಲವಾರು ಜನ ಹಿರಿಯ ಸದಸ್ಯರಿದ್ದರೂ ಅವಕಾಶ ನೀಡಲಿಲ್ಲ. ಈಗ ಬಿ.ರಮೇಶ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ವಿಶ್ವನಾಥ ಪಟ್ಟಿ, ತಿಮ್ಮಗುರು, ಜಂಬಯ್ಯ ದೊಡ್ಡಿ, ಆಂಜಿನಯ್ಯ ಮಂಚಾಲ, ಶ್ರೀನಿವಾಸ ಮಂಜರ್ಲಾ, ನರಸಿಂಹಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.