ADVERTISEMENT

ಅಕ್ರಮ ಮದ್ಯ ಮಾರಾಟ ತಕ್ಷಣ ನಿಲ್ಲಿಸಿ

ಮಹಾತ್ಮ ಗಾಂಧೀಜಿ ಪುತ್ಥಳಿ ಬಳಿ ಮಹಿಳೆಯರಿಂದ ಅನಿರ್ದಿಷ್ಟಾವಧಿ ಧರಣಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 14:50 IST
Last Updated 11 ಫೆಬ್ರುವರಿ 2021, 14:50 IST
ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಒತ್ತಾಯಿಸಿ ರಾಯಚೂರಿನಲ್ಲಿ ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಮಹಿಳೆಯರು ಗುರುವಾರದಿಂದ ಅನಿರ್ದಿಷ್ಟಾವಧಿ  ಧರಣಿ ಆರಂಭಿಸುವ ಪೂರ್ವ ಮೆರವಣಿಗೆ ನಡೆಸಿದರು
ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಒತ್ತಾಯಿಸಿ ರಾಯಚೂರಿನಲ್ಲಿ ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಮಹಿಳೆಯರು ಗುರುವಾರದಿಂದ ಅನಿರ್ದಿಷ್ಟಾವಧಿ  ಧರಣಿ ಆರಂಭಿಸುವ ಪೂರ್ವ ಮೆರವಣಿಗೆ ನಡೆಸಿದರು   

ರಾಯಚೂರು: ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟವನ್ನು ಕೂಡಲೇ ನಿಲ್ಲಿಸುವಂತೆ ಕಳೆದ ವರ್ಷ ಡಿಸೆಂಬರ್‌ 1 ರಂದು ರಾಜ್ಯ ಹೈಕೋರ್ಟ್‌, ಸರ್ಕಾರಕ್ಕೆ ಆದೇಶ ನೀಡಿತು. ಅದರಂತೆ ರಾಯಚೂರು ಸೇರಿದಂತೆ 21 ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವಂತೆ ರಾಜ್ಯ ಸರ್ಕಾರಕ್ಕೆ ಮದ್ಯ ನಿಷೇಧ ಆಂದೋಲನ–ಕರ್ನಾಟಕ ಸಂಘಟನೆಯಿಂದ ಮನವಿ ಸಲ್ಲಿಸಲಾಗಿತ್ತು. ಆದರೆ, ಸರ್ಕಾರವು ಮಹಿಳೆಯರ ಮನವಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಅಕ್ರಮ ಸ್ಥಗಿತಗೊಳಿಸುವವರೆಗೂ ಧರಣಿ ನಡೆಸಲಾಗುವುದು ಎಂದು ಮದ್ಯ ನಿಷೇಧ ಆಂದೋಲನ–ಕರ್ನಾಟಕ ಸಂಘಟನೆಯಿಂದ ಘೋಷಿಸಲಾಗಿದ್ದು, ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಧರಣಿಯನ್ನು ಗುರುವಾರದಿಂದ ಆರಂಭಿಸಲಾಗಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿರುವ ಮಹಾತ್ಮಗಾಂಧಿ ಪುತ್ಥಳಿ ಎದುರು ಧರಣಿ ನಡೆಯುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಮಹಿಳೆಯರು ಭಾಗವಹಿಸಲಿದ್ದಾರೆ. ಫೆಬ್ರುವರಿ 11 ವಿಶ್ವ ರೋಗಿಗಳ ದಿನವಾಗಿದ್ದು, ಎರಡು ಬಹುಮುಖ್ಯ ಹಕ್ಕೊತ್ತಾಯಗಳನ್ನು ಮುಂದಿಟ್ಟು ಹೋರಾಟ ಆರಂಭಿಸಲಾಗಿದೆ ಎಂದು ಧರಣಿ ನಿರತರು ತಿಳಿಸಿದರು.

ಅಕ್ರಮ ಮದ್ಯ ಮಾರಾಟದ ನಿಯಂತ್ರಣಕ್ಕಾಗಿ ಪ್ರತಿ ಗ್ರಾಮದಲ್ಲಿ ಐದು ಮಹಿಳೆಯರನ್ನೊಳಗೊಂಡ ಕಾವಲು ಸಮಿತಿ ರಚಿಸಬೇಕು. ಈ ಸಮಿತಿಗೆ ನ್ಯಾಯಾಂಗ ಅಧಿಕಾರ ನೀಡಬೇಕು. ಮಹಾರಾಷ್ಟ್ರದ ಮಾದರಿಯಲ್ಲಿ ಗ್ರಾಮದಲ್ಲಿ ಶೇ 10 ರಷ್ಟು ಜನರು ಸರಹದ್ದಿನಲ್ಲಿ ಮದ್ಯಮಾರಾಟ ಪರವಾನಿಗೆ ನಿರಾಕರಿಸಿದರೆ, ಪರಿವಾನಿಗೆ ಕೊಡಬಾರದು. ಈ ಅಂಶಗಳನ್ನು ಕರ್ನಾಟಕ ಪಾನನಿಷೇಧ ಕಾಯ್ದೆ ಅಧ್ಯಾಯ 3 ರಲ್ಲಿ ಸೇರಿಸಬೇಕು ಎಂದು ಹೇಳಿದರು.

ADVERTISEMENT

ಆನ್‌ಲೈನ್‌ ಮದ್ಯಮಾರಾಟದ ಚಿಂತನೆಯನ್ನು ತಕ್ಷಣವೇ ಕೈಬಿಡಬೇಕು. ಈ ಹಕ್ಕೊತ್ತಾಯಗಳ ಕುರಿತು ಮಹಿಳೆಯರೊಂದಿಗೆ ಮುಖ್ಯಮಂತ್ರಿ ಚರ್ಚಿಸಬೇಕು. ಸತ್ಯಾಗ್ರಹ ತೀವ್ರ ಸ್ವರೂಪ ಪಡೆದುಕೊಳ್ಳಲಿದ್ದು, ಸಾವಿರಾರು ಮಹಿಳೆಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸ್ವರ್ಣಾ ಭಟ್‌, ವಿದ್ಯಾ ಪಾಟೀಲ, ಉದಯ, ಮೋಕ್ಷಮ್ಮ, ವಿರುಪಮ್ಮ, ಗುರುರಾಜ, ಎಂ.ಆರ್‌.ಭೇರಿ, ಪದ್ಮಾ, ಕೆ.ಜಿ.ವೀರೇಶ, ಬಸವರಾಜ ಮತ್ತಿತರರು ಧರಣಿ ನೇತೃತ್ವ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.