ADVERTISEMENT

ಅಕ್ರಮ ಮರಳುಗಾರಿಕೆಯಲ್ಲಿ ಅಧಿಕಾರಿಗಳು ಭಾಗಿ: ಆರೋಪ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 12:51 IST
Last Updated 18 ನವೆಂಬರ್ 2019, 12:51 IST

ರಾಯಚೂರು: ಅಕ್ರಮ ಮರಳು ಗಣಿಗಾರಿಕೆ ನ್ಯಾಯಾಲಯ ನಿಷೇಧಿಸಿದ್ದರೂ ರಾಜಾರೋಷವಾಗಿ ಮರಳು ಸಾಗಣೆ ನಡೆಯುತ್ತಿದ್ದು, ಇದರಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತ ಭಂಗಿ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು, ದೇವದುರ್ಗ, ಸಿಂಧನೂರು, ಮಾನ್ವಿ ಈ ನಾಲ್ಕು ತಾಲ್ಲೂಕುಗಳು ಕೃಷ್ಣಾ ಮತ್ತು ತುಂಗಭದ್ರಾ ನದಿಯಿಂದ ಅಕ್ರಮ ಮರಳು ಗಣಿಗಾರಿಕೆ ನಡೆದಿದೆ. ಜೊಳದಹಡ್ಗಿಮ, ಚಿಕ್ಕರಾಯಕುಂಪಿ, ಕರ್ಕಿಹಳ್ಳಿ, ಅರಷಿಣಗಿ ಗ್ರಾಮದ ಸ್ಟಾಕ್ ಯಾರ್ಡಗಳಲ್ಲಿ ಗುತ್ತಿಗೆದಾರರು ಒಂದು ಲಾರಿಗೆ 15 ಟನ್‌ಗೆ ರಾಜಧನ ಕೊಟ್ಟು ಆ ಲಾರಿಗೆ ಅರ್ಧ ಟ್ರಿಪ್ಪು ಮರಳು 15 ಟನ್ ತುಂಬಿದ ವೇಬ್ರಿಜ್ ತೂಗಿಸಿ ಆನಂತರ ಅದೇ ಲಾರಿಗೆ ಸ್ಟಾಕ್ ಯಾರ್ಡ್‌ನಲ್ಲಿ 20 ಟನ್ ಮರಳು ಹೆಚ್ಚುವರಿ ತುಂಬುತ್ತಿದ್ದಾರೆ.

ಈ ಲಾರಿಯ ಮಾಲೀಕರು ಒಂದು ರಾಯಲ್ಟಿಗೆ ₹26 ಸಾವಿರ ಹಣ ಕೊಡುತ್ತಿದ್ದು ಈ ಹಣದಲ್ಲಿ ಸರ್ಕಾರಕ್ಕೆ ರಾಜಧನ ₹10 ಸಾವಿರ ಮಾತ್ರ ಸೇರುತ್ತದೆ. ಇನ್ನೂಳಿದ ₹16 ಸಾವಿರ ಹಣವೆಲ್ಲ ಗುತ್ತಿಗೆದಾರರಿಗೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೇರುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ ಎಂದರು.

ADVERTISEMENT

ಕರ್ಕಿಹಳಿ ಗ್ರಾಮದ ಕೃಷ್ಣಾ ನದಿಯಲ್ಲಿ ಟೆಂಡರ್ ಇಲ್ಲದೇ ಅಕ್ರಮ ಗಣಿಗಾರಿಕೆಯಲ್ಲಿ ಜಿಲ್ಲೆಯ ಕೆಲವು ಅಧಿಕಾರಿಗಳು ಮತ್ತು ರಾಜಕಾರಣಿಗಳು ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿದರು. ಈ ಅಕ್ರಮ ಮರಳು ಗಣಿಗಾರಿಕೆ ಹೋರಾಟದಲ್ಲಿ ಅನೇಕ ಬಾರಿ ನನ್ನ ಮೇಲೆ ಹಲ್ಲೆಗಳಾಗಿವೆ. ನನ್ನ ಮೇಲೆಯೂ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವವರ ವಿರುದ್ಧ ಜಾಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.