ADVERTISEMENT

ಸಿಎಎ ಕಾಯ್ದೆ ರದ್ದುಗೊಳಿಸಲು ಒತ್ತಾಯಿಸಿದ ಜಿಲ್ಲಾ ನ್ಯಾಯವಾದಿಗಳ ಹೋರಾಟ ಸಮಿತಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 16:42 IST
Last Updated 20 ಜನವರಿ 2020, 16:42 IST
ರಾಯಚೂರಿನ ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿ ರಾಷ್ಟ್ರೀಯ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಜಿಲ್ಲಾ ನ್ಯಾಯವಾದಿ ಹೋರಾಟ ಸಮಿತಿ ಜಿಲ್ಲಾ ಘಟದಿಂದ ಸೋಮವಾರ ಪ್ರತಿಭಟನೆ ಮಾಡಲಾಯಿತು
ರಾಯಚೂರಿನ ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿ ರಾಷ್ಟ್ರೀಯ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಜಿಲ್ಲಾ ನ್ಯಾಯವಾದಿ ಹೋರಾಟ ಸಮಿತಿ ಜಿಲ್ಲಾ ಘಟದಿಂದ ಸೋಮವಾರ ಪ್ರತಿಭಟನೆ ಮಾಡಲಾಯಿತು   

ರಾಯಚೂರು: ಸಂವಿಧಾನದ ಜಾತ್ಯತೀತ ಮೂಲತತ್ವಗಳು ಮತ್ತು ದೇಶದ ಶೇ 70 ರಷ್ಟು ಜನವಿರೋಧಿ ಸಿಎಎ, ಎನ್‌ಪಿಆರ್, ಎನ್ಆರ್‌ಸಿ ಕಾಯ್ದೆಗಳ ತಿದ್ದುಪಡಿಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಜಿಲ್ಲಾ ನ್ಯಾಯವಾದಿಗಳ ಹೋರಾಟ ಸಮಿತಿ ಜಿಲ್ಲಾ ಘಟಕದಿಂದ ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ತಿದ್ದುಪಡಿ ಕಾಯ್ದೆಗಳು ಸಂವಿಧಾನದ ಜಾತ್ಯತೀತ ಮೂಲತತ್ವಗಳು ಮತ್ತು ಪರಿಚ್ಛೇದ 14 ಸಮಾನತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ಹಳೆಯ ಪೌರತ್ವ ಕಾಯ್ದೆ 1955 ರಂತೆ ವಿದೇಶಿಯರು ಭಾರತಕ್ಕೆ ವಲಸೆ ಬಂದು 12 ವರ್ಷಕ್ಕಿಂತಲೂ ಹೆಚ್ಚು ವರ್ಷ ನೆಲೆಸಿದ್ದರೆ, ಪೌರತ್ವ ಪಡೆಯಲು ಅರ್ಹರಾಗಿದ್ದಾರೆ. ಭಾರತದಲ್ಲಿ ಜನ್ಮ ಪಡೆದವರು ಪೌರತ್ವಕ್ಕೆ ಅರ್ಹರಾಗಿರುತ್ತಾರೆ. 2019ರ ಪೌರತ್ವ ತಿದ್ದುಪಡಿ ಕಾಯ್ದೆಯು ಇತಿಹಾಸದಲ್ಲಿ ಪ್ರಥಮ ಬಾರಿಗೆ ಭಾರತದ ಪೌರರು ಎಂದು ಸಾಬೀತು ಪಡಿಸಿಕೊಳ್ಳುವ ದುಸ್ಥಿತಿಗೆ ಭಾರತೀಯರು ತಳ್ಳಲ್ಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕೇಂದ್ರ ಸರ್ಕಾರವು ಪೌರತ್ವ ನೀಡುವ ನೆಪದಲ್ಲಿ ಅಕ್ರಮ ವಲಸಿಗರ ವ್ಯಾಖ್ಯಾನದ ಅರ್ಥವನ್ನು ತಿರುಚಿ ಧಾರ್ಮಿಕ ಆಧಾರದ ಮೇಲೆ ಪೌರತ್ವ ನೀಡಿ, ಮುಸ್ಲಿಂ ಸಮುದಾಯದ ಹೊರತುಪಡಿಸಿ ಧಾರ್ಮಿಕ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಸಮಾನತೆ, ಜಾತ್ಯತೀತ ತತ್ವಗಳನ್ನು ಕಡೆಗಣಿಸಿದ್ದಾರೆ ಎಂದು ದೂರಿದರು.

ದೇಶವು ಆರ್ಥಿಕ ಹಿಂಜರಿತದಿಂದ 40 ವರ್ಷಗಳ ಹಿಂದಕ್ಕೆ ಹೋಗಿದ್ದನ್ನು ಜನರು ಪ್ರಶ್ನಿಸಲಾಗದಂತಹ ಧಾರ್ಮಿಕ ಉನ್ಮಾದ, ನಕಲಿ ದೇಶಭಕ್ತಿ, ಷಡ್ಯಂತ್ರದ ಭಾಗವಾಗಿ ಬಿಜೆಪಿ ಕೇಂದ್ರ ಸರ್ಕಾರವು ಜಾರಿಗೊಳಿಸಿದೆ. ಪೌರತ್ವ ಕಾಯ್ದೆ ತಿದ್ದುಪಡಿ 2019, ಪೌರತ್ವ ಜನಸಂಖ್ಯೆ ನೊಂದಣಿ 2020 ತಿದ್ದುಪಡಿಗಳನ್ನು ಕೂಡಲೇ ಹಿಂಪಡೆಯಬೇಕೆಂದು ಹಾಗೂ ಪೌರತ್ವ ಕಾಯ್ದೆ 1955 ರಲ್ಲಿನ ರಾಷ್ಟ್ರೀಯ ಗುರುತಿನ ಕಾರ್ಡುಗಳ ಜಾರಿಗೆಗೆ ಸಂಬಂಧಿಸಿದಂತೆ ನಿಯಮ 14ಎ, 18(2)(1ಎ) ಗಳನ್ನು ರದ್ದು ಮಾಡಬೇಕು. ವಿದೇಶಿಯರ ತಿದ್ದುಪಡಿ ಆರ್ಡರ್ 2019ನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ವಕೀಲರಾದ ಎಸ್‌.ಮಾರಪ್ಪ,‌‌ ಅರ್. ಗೌಸ್ ಪಾಷಾ, ಕೆ.ಕರುಣಾಕರ್, ಎನ್.ವಾಹಿದ್ ಪಟೇಲ್, ಎಎಂ ಅಲಿಖಾನ್, ಮಹ್ಮದ್ ಅಬ್ದುಲ್ ವಾಜೀದ್ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.