ADVERTISEMENT

ತಂತ್ರಜ್ಞಾನ ಬಳಸಿಕೊಂಡು ವ್ಯವಸ್ಥಿತ ಕೃಷಿಗೆ ಮುಂದಾಗಿ: ಪ್ರಭಾರಿ ಕುಲಪತಿ ಎಸ್.ಕೆ.ಮ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 16:30 IST
Last Updated 24 ಡಿಸೆಂಬರ್ 2018, 16:30 IST
ರಾಯಚೂರಿನಲ್ಲಿ ಭಾನುವಾರ ಆಯೋಜಿಸಿದ್ದ ರೈತ ದಿನಾಚರಣೆಯಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಭಾರಿ ಕುಲಪತಿ ಎಸ್.ಕೆ.ಮೇಟಿ ಮಾತನಾಡಿದರು
ರಾಯಚೂರಿನಲ್ಲಿ ಭಾನುವಾರ ಆಯೋಜಿಸಿದ್ದ ರೈತ ದಿನಾಚರಣೆಯಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಭಾರಿ ಕುಲಪತಿ ಎಸ್.ಕೆ.ಮೇಟಿ ಮಾತನಾಡಿದರು   

ರಾಯಚೂರು: ವಿಜ್ಞಾನಿಗಳು ಕಂಡುಹಿಡಿಯುವ ತಂತ್ರಜ್ಞಾನವನ್ನು ಬಳಸಿಕೊಂಡು ರೈತರು ವ್ಯವಸ್ಥಿತವಾದ ಕೃಷಿ ಮಾಡಬೇಕು ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಭಾರಿ ಕುಲಪತಿ ಎಸ್.ಕೆ.ಮೇಟಿ ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೃಷಿಕ ಸಮಾಜ, ಕೃಷಿ ಇಲಾಖೆ ಮತ್ತು ಕೃಷಿ ತಜ್ಞರ ಸಂಸ್ಥೆಯಿಂದ ಭಾನುವಾರ ಆಯೋಜಿಸಿದ್ದ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ರೈತರು ರಾಸಾಯನಿಕ ಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ಬಳಸಿ ಸಾವಯವ ಗೊಬ್ಬರ ಬಳಸುವುದೇ ಕೈಬಿಡುತ್ತಿರುವುದು ವಿಷಾದನೀಯವಾಗಿದ್ದು, ಯೋಚಿಸಿ, ಯೋಜನೆ ರೂಪಿಸಿಕೊಂಡು ಸವಲತ್ತುಗಳನ್ನು ಬಳಸಿಕೊಳ್ಳಬೇಕು ಎಂದರು.

ADVERTISEMENT

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ದೇಶದ ಐದನೇ ಪ್ರಧಾನಮಂತ್ರಿಯಾಗಿದ್ದ ಚರಣಸಿಂಗ್ ಅವರು ಕೃಷಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಅವರ ಕೃಷಿ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಎಸ್‌.ಎಂ.ಸಿದ್ಧಾರೆಡ್ಡಿ ಮಾತನಾಡಿ, ಹವಾಮಾನ ವೈಪರಿತ್ಯದಿಂದ ಬರಗಾಲ ನಿರ್ಮಾಣವಾಗಿದ್ದರೂ, ರೈತರು ಎದೆಗುಂದದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಭಾಗದ ರೈತರಿಗೆ ಶೀತಲಗೃಹಗಳ ಅವಶ್ಯಕತೆ ಇದೆ ಎಂದು ತಿಳಿಸಿದರು.

ಬೀಜ ಘಟಕದ ವಿಶೇಷ ಅಧಿಕಾರಿ ಬಸವೇಗೌಡ ಮಾತನಾಡಿ, ವೈಜ್ಞಾನಿಕ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅನುದಾನ ಸಿಗಲಿದೆ ಎಂಬ ಕಾರಣದಿಂದ ಬೀಜ ಖರೀದಿ ಮಾಡಬಾರದು. ಒಮ್ಮೆ ಖರೀದಿಸಿದ ಬೀಜವನ್ನು ಎರಡ್ಮೂರು ವರ್ಷಗಳವರೆಗೆ ಬಳಸಬಹುದಾಗಿದೆ ಎಂದರು.

ಎ.ಆರ್.ಕುರುಬರ ಮಾತನಾಡಿ, ನೀರಿಲ್ಲದಿದ್ದರೂ ತೋಟಗಾರಿಗೆ ಬೆಳೆ ಬೆಳೆಯುವ ವಿಧಾನವನ್ನು ರೈತರಿಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಬಿ.ಕೆ.ದೇಸಾಯಿ ಮಾತನಾಡಿ, ರೈತರು ನಿರಂತರ ಆದಾಯ ನೀಡುವ ಕೃಷಿಯನ್ನು ಮಾಡಬೇಕು. ಜೊತೆಗೆ ಮಾರುಕಟ್ಟೆ ವ್ಯವಹಾರದ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

2017-18ನೇಸಾಲಿನಲ್ಲಿ ಉತ್ತಮವಾಗಿ ತೊಗರಿ ಬೆಳೆ ಬೆಳೆದ ರೈತರಾದ ರಾಮಣ್ಣ ಹುಲಿಗತ್ತಿ, ಹನುಮಂತ, ಸವಾರೆಪ್ಪ, ಗೋನಾಳ, ಶಿವಶಂಕರ ಅರಿಷಿಣಗಿ ಅವರನ್ನು ಸನ್ಮಾನಿಸಲಾಯಿತು.

ಸಹಾಯಕ ನಿರ್ದೇಶಕ ಆರ್.ಜಿ.ಸಂದೀಪ ಇದ್ದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಜಿ.ಎಸ್.ಯಡಹಳ್ಳಿ ಸ್ವಾಗತಿಸಿದರು. ಅನುಪಮಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.