ADVERTISEMENT

ಹಣ, ಜಾತಿಬಲದ ನಡುವೆ ‘ಮೌಲ್ಯ ರಾಜಕಾರಣ’ ಕಣ್ಮರೆ

ಸಂತೆಲ್ಲೂರ ಘನಮಠದಲ್ಲಿ ವಿಶೇಷ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 5:22 IST
Last Updated 23 ಡಿಸೆಂಬರ್ 2025, 5:22 IST
ಮಸ್ಕಿ ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಘನಮಠ ಶಿವಯೋಗಿಗಳ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಹಿಮಾ ಪಟೇಲ್ ಅವರಿಗೆ  “ಘನಶ್ರೀ’ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಮಸ್ಕಿ ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಘನಮಠ ಶಿವಯೋಗಿಗಳ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಹಿಮಾ ಪಟೇಲ್ ಅವರಿಗೆ  “ಘನಶ್ರೀ’ ಪ್ರಶಸ್ತಿ ಪ್ರಧಾನ ಮಾಡಲಾಯಿತು.   

ಮಸ್ಕಿ: ‘ಹಣ, ಜಾತಿ ಬಲದ ನಡುವೆ ಇಂದು ಮೌಲ್ಯಾಧಾರಿತ ರಾಜಕಾರಣ ಕಣ್ಮರೆಯಾಗುತ್ತಿದೆ’ ಎಂದು ಮಾಜಿ ಶಾಸಕ ಮಹಿಮಾ ಪಟೇಲ್ ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನ ಸಂತೆಲ್ಲೂರ ಘನಮಠದಲ್ಲಿ ಲಿಂ.ಘನಮಠ ಶಿವಯೋಗಿಗಳ 146ನೇ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ‘ಘನಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಹಿಂದೆ ರಾಜ್ಯದ ರಾಜಕಾರಣದಲ್ಲಿ ತತ್ವ, ಸಿದ್ಧಾಂತ ಹಾಗೂ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ಇತ್ತು’ ಎಂದರು.

‘ಮೌಲ್ಯಾಧಾರಿತ ರಾಜಕಾರಣದ ಕನಸೊಂದಿಗೆ ವಿಧಾನಸಭೆಗೆ ಪ್ರವೇಶಿಸಿದ ನನಗೆ, ಕೆಲ ಸಮಯದ ನಂತರ ಯಾಕೆ ಇಲ್ಲಿಗೆ ಬಂದೆ ಎಂಬ ಪ್ರಶ್ನೆ ಕಾಡಿತು’ ಎಂದು ಆತ್ಮಾವಲೋಕನ ಮಾಡಿಕೊಂಡರು.

ADVERTISEMENT

‘ಇಂದಿನ ದಿನಗಳಲ್ಲಿ ಹಣಬಲ, ಜಾತಿಬಲವೇ ಚುನಾವಣೆಯ ಪ್ರಮುಖ ಅಸ್ತ್ರವಾಗಿರುವುದು ದುಃಖಕರ ಸಂಗತಿ. ರಾಜಕೀಯದಲ್ಲಿ ಮೌಲ್ಯಗಳು ಉಳಿದಾಗ ಮಾತ್ರ ಜನಸೇವೆ ಸಾರ್ಥಕವಾಗುತ್ತದೆ’ ಎಂದರು.

ಮಾಜಿ ಸಚಿವ ಅಮರೇಗೌಡ ಪಾಟೀಲ,‘ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮೌಲ್ಯಾಧಾರಿತ ನಾಯಕತ್ವ ಅಗತ್ಯವಿದೆ’ ಎಂದರು.

ಕಾರ್ಯಕ್ರಮದಲ್ಲಿ ಸಂತೆಲ್ಲೂರ ಘನಮಠದ ಗುರುಬಸವ ಸ್ವಾಮೀಜಿ, ಮಸ್ಕಿ ಗಚ್ಚಿನಮಠದ ರುದ್ರಮುನಿ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಪ್ರಶಾಂತ ದೇವರು, ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನಮನ ಗೌಡ ಬೆಳಗುರ್ಕಿ, ಡಾ. ಸುರೇಶ ಸಗರದ ಸೇರಿದಂತೆ ಅನೇಕ ಮಠಾಧೀಶರು, ಗಣ್ಯರು ಪಾಲ್ಗೊಂಡಿದ್ದರು. ಘನಮಠದಯ್ಯ ನಿರ್ವಹಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಮಹಿಮಾ ಪಟೇಲ್ ಅವರಿಗೆ ‘ಘನಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಜಕೀಯದಲ್ಲಿ ಹಣ ಮತ್ತು ಜಾತಿಯ ಪ್ರಭಾವ ಹೆಚ್ಚಿದಂತೆ ಮೌಲ್ಯಗಳು ಹಿಂಬದಿಗೆ ಸರಿಯುತ್ತಿವೆ. ಮೌಲ್ಯಾಧಾರಿತ ರಾಜಕಾರಣಕ್ಕೆ ಮತ್ತೆ ಜೀವ ತುಂಬಬೇಕಿದೆ
ಮಹಿಮಾ ಪಟೇಲ್ ಮಾಜಿ ಶಾಸಕ

ತುಂಗಭದ್ರಾ ಉಳಿಸಿ: ಜನಜಾಗೃತಿ ಜಾಥಾ 27ರಿಂದ ‘ತುಂಗಭದ್ರಾ ನದಿಯ ಸಂರಕ್ಷಣೆ ಹಾಗೂ ರಕ್ಷಣೆಗೆ ಆಗ್ರಹಿಸಿ ಡಿಸೆಂಬರ್ 27ರಿಂದ ಜನವರಿ 4ರವರೆಗೆ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ’ ಎಂದು ಮಾಜಿ ಶಾಸಕ ಮಹಿಮಾ ಪಟೇಲ್ ತಿಳಿಸಿದರು. ನದಿ ಮಾಲಿನ್ಯ ಅಕ್ರಮ ಮರಳು ಗಣಿಗಾರಿಕೆ ಮತ್ತು ನಿರ್ಲಕ್ಷ್ಯದಿಂದ ತುಂಗಭದ್ರಾ ಅಪಾಯದಲ್ಲಿದೆ. ತುಂಗಭದ್ರಾ ಈ ಭಾಗದ ಜೀವನಾಳವಾಗಿದ್ದು ಕೃಷಿ ಕುಡಿಯುವ ನೀರು ಮತ್ತು ಪರಿಸರ ಸಮತೋಲನಕ್ಕೆ ಅತ್ಯಂತ ಅಗತ್ಯವಾಗಿದೆ ಎಂದರು. ‘ಜನಜಾಗೃತಿ ಜಾಥೆಯ ಮೂಲಕ ನದಿ ಉಳಿಸುವ ಸಂದೇಶವನ್ನು ಹಳ್ಳಿ–ಹಳ್ಳಿಗೆ ತಲುಪಿಸಲಾಗುತ್ತದೆ. ನದಿ ಸಂರಕ್ಷಣೆಗೆ ಸರ್ಕಾರ ಸಂಘ–ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.