ADVERTISEMENT

ವಿಸಿಬಿಸಂಸ್ಥೆಗೆ ಸರ್ಕಾರಿ ಜಾಗ ಗುತ್ತಿಗೆ ರದ್ದುಪಡಿಸಲು ಆಗ್ರಹ

ಮಿನಿವಿಧಾನಸೌಧ ಮುಂದೆ ಕೆಆರ್‌ಎಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 5:06 IST
Last Updated 26 ನವೆಂಬರ್ 2022, 5:06 IST
ಸಿಂಧನೂರಿನ ಟಿಎಪಿಸಿಎಂಎಸ್‍ಗೆ ಸೇರಿದ ಭೂಮಿಯನ್ನು ವಿಸಿಬಿ ಶಿಕ್ಷಣ ಸಂಸ್ಥೆಗೆ ಕಾನೂನು ಬಾಹಿರವಾಗಿ ಗುತ್ತಿಗೆ ನೀಡಿರುವುದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ತಾಲ್ಲೂಕು ಘಟಕದ ಸದಸ್ಯರು ಶುಕ್ರವಾರ ಮಿನಿವಿಧಾನಸೌಧ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದರು
ಸಿಂಧನೂರಿನ ಟಿಎಪಿಸಿಎಂಎಸ್‍ಗೆ ಸೇರಿದ ಭೂಮಿಯನ್ನು ವಿಸಿಬಿ ಶಿಕ್ಷಣ ಸಂಸ್ಥೆಗೆ ಕಾನೂನು ಬಾಹಿರವಾಗಿ ಗುತ್ತಿಗೆ ನೀಡಿರುವುದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ತಾಲ್ಲೂಕು ಘಟಕದ ಸದಸ್ಯರು ಶುಕ್ರವಾರ ಮಿನಿವಿಧಾನಸೌಧ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದರು   

ಸಿಂಧನೂರು: ಸಿಂಧನೂರಿನ ಟಿಎಪಿಸಿಎಂಎಸ್‍ಗೆ ಸೇರಿದ 3 ಎಕರೆ 20 ಗುಂಟೆ ಭೂಮಿಯನ್ನು ವಿಸಿಬಿ ಶಿಕ್ಷಣ ಸಂಸ್ಥೆಗೆ ಕಾನೂನು ಬಾಹಿರವಾಗಿ ಗುತ್ತಿಗೆ ನೀಡಿದ್ದು, ತಕ್ಷಣವೇ ಇದನ್ನು ರದ್ದುಪಡಿಸಬೇಕು. ಈ ವ್ಯವಹಾರದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ತಾಲ್ಲೂಕು ಘಟಕ ಶುಕ್ರವಾರ ಪ್ರತಿಭಟಿಸಿತು.

ನಗರದ ಕುಷ್ಟಗಿ ರಸ್ತೆಗೆ ಹೊಂದಿಕೊಂಡಿರುವ ಟಿಎಪಿಸಿ ಎಂಎಸ್‍ಗೆ ಸೇರಿದ 5 ಎಕರೆ 20 ಗುಂಟೆ ಭೂಮಿಯಿದೆ. ಹತ್ತಾರು ಕೋಟಿಗೆ ಬೆಲೆ ಬಾಳುವ ಈ ಭೂಮಿಯನ್ನು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ತಮ್ಮ ಕುಟುಂಬದ ಒಡೆತನದಲ್ಲಿರುವ ವಿಸಿಬಿ ಶಿಕ್ಷಣ ಸಂಸ್ಥೆಯ ಹಂಪಮ್ಮ ಬಾದರ್ಲಿ ಪ್ರೌಢ ಶಾಲೆಗಾಗಿ ಜುಲೈ 29, 2016 ರಂದು 3 ಎಕರೆ 20 ಗುಂಟೆ ಭೂಮಿಯನ್ನು ಗುತ್ತಿಗೆ ಪಡೆದಿ ದ್ದಾರೆ. ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಈ ಕೋಟ್ಯಾಂತರ ರೂಪಾಯಿಗಳ ವ್ಯವಹಾರದಲ್ಲಿ ಶ್ಯಾಮೀಲಾಗಿದ್ದಾರೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ್ ಬೇರಿಗಿ ಆರೋಪಿಸಿದರು.

ವಿಸಿಬಿ ಶಿಕ್ಷಣ ಸಂಸ್ಥೆಯಿಂದ ಈ ಜಾಗದಲ್ಲಿ ಶಿಕ್ಷಣ ಕಾರ್ಯ ನಿರ್ವಹಣೆ ಹಾಗೂ ಬೋಧನೆ ನಡೆದಿದೆ ಎಂದು ಸಚಿವರಿಗೆ ಹಾಗೂ ಸರ್ಕಾಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ ಈ ಜಾಗ ಪಾಳು ಬಿದ್ದಿದೆ. ಸಹಕಾರ ಇಲಾಖೆಯ ಅಧಿಕಾರಿಗಳು ಜಾಗದ ವಾಸ್ತವ ಸ್ಥಿತಿಯನ್ನು ಸಚಿವರ ಗಮನಕ್ಕೆ ತಂದು ತಕರಾರು ಮಾಡಬೇಕಿತ್ತು. ಆದರೆ ಬೇಜವಾಬ್ದಾರಿ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಪ್ರತಿವರ್ಷ ₹17 ಸಾವಿರದಂತೆ 30 ವರ್ಷಗಳವರೆಗೆ ಗುತ್ತಿಗೆ ನೀಡಿರುವುದು ಕಾನೂನು ಬಾಹಿರವಾಗಿದೆ. ತಕ್ಷಣವೇ ಭೂ ಗುತ್ತಿಗೆ ಆದೇಶವನ್ನು ರದ್ದು ಪಡಿಸುವಂತೆ ಸರ್ಕಾರಕ್ಕೆ ಪತ್ರ ಬರೆಯ ಬೇಕು. ಇಲ್ಲದಿದ್ದರೆ ಹೋರಾಟ ನಡೆಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ADVERTISEMENT

ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ಎನ್.ಯರದಿಹಾಳ, ತಾಲ್ಲೂಕು ಘಟಕದ ಉಪಾಧ್ಯಕ್ಷ ಚಿಟ್ಟಿಬಾಬು, ಸದಸ್ಯರಾದ ಬಂಗಾರಪ್ಪ, ನಜೀರ್‍ಸಾಬ, ಯಾಸಿನ್, ಎನ್.ಗೋಪಾಲರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.