ADVERTISEMENT

ಲಿಂಗಸುಗೂರು: ಬಾರೆಹಣ್ಣು ಜಾತ್ರೆ ನೋಡ ಬನ್ನಿ...

ಭಾನುವಾರ ಕಳಸಾರೋಹಣ ಸಂಭ್ರಮ ಇಂದು; ಮಹಾರಥೋತ್ಸವ ಸಡಗರ ನಾಳೆ

ಪ್ರಜಾವಾಣಿ ವಿಶೇಷ
Published 1 ಡಿಸೆಂಬರ್ 2024, 5:20 IST
Last Updated 1 ಡಿಸೆಂಬರ್ 2024, 5:20 IST
ಲಿಂಗಸುಗೂರು ತಾಲ್ಲೂಕು ಐದನಾಳ ಗ್ರಾಮ ಸಂಪರ್ಕಿಸುವ ಕ್ರಾಸ್ನಲ್ಲಿ ದೇವಸ್ಥಾನ ಸಮಿತಿ ನಿರ್ಮಿಸಿದ ನೂತನ ಸ್ವಾಗತ ಕಮಾನು
ಲಿಂಗಸುಗೂರು ತಾಲ್ಲೂಕು ಐದನಾಳ ಗ್ರಾಮ ಸಂಪರ್ಕಿಸುವ ಕ್ರಾಸ್ನಲ್ಲಿ ದೇವಸ್ಥಾನ ಸಮಿತಿ ನಿರ್ಮಿಸಿದ ನೂತನ ಸ್ವಾಗತ ಕಮಾನು   

ಲಿಂಗಸುಗೂರು: ಇಲ್ಲಿಗೆ ಸಮೀಪದ ಐದನಾಳ ಗ್ರಾಮದಲ್ಲೀಗ ವೀರಭದ್ರೇಶ್ವರ ದೇವರ ಜಾತ್ರೆ ಸಡಗರ ಮನೆ ಮಾಡಿದೆ. ಈ ಜಾತ್ರಾ ಮಹೋತ್ಸವ ಬಾರೆಹಣ್ಣಿನ ಸುಗ್ಗಿ ದಿನಗಳಲ್ಲಿ ಬರುವುದರಿಂದ ಬಾರೆಹಣ್ಣಿನ ಜಾತ್ರೆ ಎಂದೇ ಪ್ರಸಿದ್ಧಿ.

ತಾಲ್ಲೂಕು ಕೇಂದ್ರದಿಂದ ಕೇವಲ 3 ಕಿ.ಮೀ ಅಂತರದಲ್ಲಿರುವ ಕುಗ್ರಾಮ ಐದನಾಳ. ಇಲ್ಲಿ ವೀರಭದ್ರೇಶ್ವರ ದೇವರು ಮತ್ತು ಸ್ವರ ವಚನಕಾರ ಬಸವಲಿಂಗಪ್ಪ ತಾತನ ಕರ್ತೃ ಗದ್ದುಗೆ ಇದ್ದು, ಧಾರ್ಮಿಕವಾಗಿ ಹೆಚ್ಚು ಪ್ರಚಲಿತದಲ್ಲಿದೆ. ಇಲ್ಲಿನ ವೀರಭದ್ರೇಶ್ವರ ದೇವರು ಕುರಿಹಟ್ಟಿಯಲ್ಲಿ ಉದ್ಭವಿಸಿದ ಲಿಂಗಸ್ವರೂಪಿ ಎಂಬ ಪ್ರತೀತಿ ಇದೆ.

‘ಆರು ಶತಮಾನಗಳ ಹಿಂದೆ ಕುರಿ ಹಟ್ಟಿ ಹಾಕುತ್ತಿರುವ ಸ್ಥಳದಲ್ಲಿನ ಕಲ್ಲುಗಳನ್ನು ತೆಗೆದುಹಾಕಿ ಶುಚಿ ಮಾಡುತ್ತಿದ್ದಾಗ ಲಿಂಗಸ್ವರೂಪಿ ವೀರಭದ್ರ ಪ್ರತ್ಯಕ್ಷನಾದ. ಕುರಿಹಟ್ಟಿ ಕಲ್ಲು ಎಷ್ಟೆಲ್ಲಾ ತೆಗೆದು ಹಾಕುತ್ತ ಬಂದರೂ ಪುನಃ ಅದೇ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿದ್ದ’ ಎಂಬ ದಂತಕಥೆ ಈ ಭಾಗದಲ್ಲಿ ಪ್ರಚಲಿತದಲ್ಲಿದೆ.

ADVERTISEMENT

‘ಸುಕ್ಷೇತ್ರ ಗುರುಗುಂಟಾ ಅಮರೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆ ಮೂಲಕ ಹೋಗುತ್ತಿದ್ದ ಅಂಧ ಮಹಿಳೆಯೊಬ್ಬರು ಅದೇ ಸ್ಥಳದಲ್ಲಿಎಡವಿ ನೆಲಕ್ಕೆ ಬೀಳುತ್ತಾರೆ. ಆಗ ಮಹಿಳೆಗೆ ಕಣ್ಣು ಬಂದವು. ಅಲ್ಲಿಂದ ಕುರಿಗಾಹಿಗಳು ಪೂಜೆ ಆರಂಭಿಸಿದರು. ಪವಾಡಗಳ ಸರಣಿ ಕಂಡು ಭಕ್ತರು ದೇವಸ್ಥಾನ ನಿರ್ಮಿಸಿದರು’ ಎಂಬ ಪ್ರತೀತಿಯೂ ಇದೆ.

ಪ್ರತಿ ಶ್ರಾವಣ ಮಾಸದಲ್ಲಿ ವೀರಭದ್ರೇಶ್ವರ ದೇವರ ಉತ್ಸವ ಮೂರ್ತಿ ಮತ್ತು ಬೀರಲಿಂಗೇಶ್ವರ ದೇವರು ಗಂಗಾ ಸ್ಥಳಕ್ಕೆ ಜಂಟಿಯಾಗಿ ಹೋಗಿ ಬರುವ ಸಾಂಪ್ರದಾಯಿಕ ಪದ್ಧತಿ. ಸಾಂಪ್ರದಾಯದಂತೆ ಛಟ್ಟಿ ಅಮಾವಾಸ್ಯೆ ದಿನ ದೇವಸ್ಥಾನಕ್ಕೆ ಕಳಸಾರೋಹಣ ನೆರವೇರಿಸಿ ಉಚ್ಛ್ರಾಯ ಸಿದ್ಧತೆ ಮೂಲಕ ಪೂಜಾ ಕೈಂಕರ್ಯಗಳು ಆರಂಭಗೊಳ್ಳುತ್ತವೆ.

ಅಮಾವಾಸ್ಯೆ ಮರುದಿನ ವೀರಭದ್ರ ದೇವರಿಗೆ ಮಹಾ ರುದ್ರಾಭಿಷೇಕ, ಗ್ರಾಮದ ದೇವರ ಗುಡಿಗೆ ಪೂಜೆ, ಸಂತೆ ಮಹಾ ರಥೋತ್ಸವ ಜರಗುತ್ತದೆ. ರಥೋತ್ಸವದ ನಂತರ ಅಹೋರಾತ್ರಿ ಪುರವಂತಿಕೆ ಸಮೇತ ಹಾಲಿನ ಕುಂಭ, ಕಳಸದ ಸಮೇತ ಪಲ್ಲಕ್ಕಿ ಸೇವೆ ಜರುಗುತ್ತದೆ. ಮರುದಿನ ಬಸಲಿಂಗಪ್ಪ ತಾತನ ಗದ್ದುಗೆ ತನಕ ತೆರಳಿ ಸಮಾಪ್ತಿಗೊಳ್ಳುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಶಿವ ಮಾಲೆಧಾರೆ ಹಾಕುವ ಪದ್ಧತಿ ಅನುಷ್ಠಾನಕ್ಕೆ ಬಂದಿದೆ. ವೀರನಗೌಡ ಪೊಲೀಸ್‍ ಪಾಟೀಲ ಕುಟುಂಬಸ್ಥರು ಪಾರ್ವತೆಮ್ಮ ಶರಣಗೌಡ ಪಾಟೀಲ ಸ್ಮರಣಾರ್ಥ ಪ್ರತಿ ಅಮಾವಾಸ್ಯೆಗೆ ಅನ್ನದಾಸೋಹ ಏರ್ಪಡಿಸುತ್ತಾರೆ. ಈ ವರ್ಷ ಭಕ್ತರಿಗೆ ಆರೋಗ್ಯ ಉಚಿತ ತಪಾಸಣೆ ಆಯೋಜಿಸಿದ್ದು ವಿಶೇಷ.

‘ದೀಪಾವಳಿ ಅಮಾವಾಸ್ಯೆಯಿಂದ ಛಟ್ಟಿ ಅಮಾವಾಸ್ಯೆ ವರೆಗೆ ನಿತ್ಯ ಪಲ್ಲಕ್ಕಿ ಸೇವೆ ಜರುಗುತ್ತದೆ. ಈ ವರ್ಷ ಡಿ.1(ಭಾನುವಾರ) ಅಮಾವಾಸ್ಯೆ ದಿನ ದೇವಸ್ಥಾನದ ಕಳಸಾರೋಹಣ ನಡೆಯಲಿದೆ. ಡಿ.2ರಂದು(ಸೋಮವಾರ) ಸಂಜೆ 6 ಗಂಟೆಗೆ ಮಹಾರಥೋತ್ಸವ ಜರುಗಲಿದೆ’ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಪುಟ್ಟಗ್ರಾಮದ ಎಲ್ಲ ಜಾತಿ–ಜನಾಂಗದವರು ವೀರಭದ್ರೇಶ್ವರ ಜಾತ್ರೆ ಆಚರಿಸುತ್ತ ಬಂದಿದ್ದೇವೆ. ಈ ಜಾತ್ರೆಗೆ ಬಾರೆಹಣ್ಣಿನ ಜಾತ್ರೆ ಎಂದು ಕರೆಯುವುದು ವಾಡಿಕೆ
-ಬಸವರಾಜ ಸೂಗೂರಡ್ಡಿ, ಮುಖ್ಯಸ್ಥ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಐದನಾಳ

ಲಿಂಗಸುಗೂರು ತಾಲ್ಲೂಕು ಐದನಾಳ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಹೊರ ನೋಟ

ಲಿಂಗಸುಗೂರು ತಾಲ್ಲೂಕು ಐದನಾಳ ಗ್ರಾಮದ ವೀರಭದ್ರೇಶ್ವರ ದೇವರಿಗೆ ರಜತ ಕವಚನದ ಅಲಂಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.