ADVERTISEMENT

ಮಸ್ಕಿ | ವೀರಶೈವ ಲಿಂಗಾಯತ ಮಠಗಳ‌ ಕೊಡುಗೆ ಅಪಾರ: ಅಮರೇಗೌಡ ಬಯ್ಯಾಪುರ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 6:16 IST
Last Updated 11 ಸೆಪ್ಟೆಂಬರ್ 2025, 6:16 IST
ಮಸ್ಕಿ ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಬುಧವಾರ ನಡೆದ ಮಸ್ಕಿ ಕ್ಷೇತ್ರದ ವೀರಶೈವ ಲಿಂಗಾಯತ ಸಮಾಜದ ಪ್ರಥಮ ಮಹಾಸಭೆಯನ್ನು ಅಮರೇಗೌಡ ಬಯ್ಯಾಪುರ ಉದ್ಘಾಟಿಸಿದರು
ಮಸ್ಕಿ ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಬುಧವಾರ ನಡೆದ ಮಸ್ಕಿ ಕ್ಷೇತ್ರದ ವೀರಶೈವ ಲಿಂಗಾಯತ ಸಮಾಜದ ಪ್ರಥಮ ಮಹಾಸಭೆಯನ್ನು ಅಮರೇಗೌಡ ಬಯ್ಯಾಪುರ ಉದ್ಘಾಟಿಸಿದರು   

ಮಸ್ಕಿ: ‘ನಾಡಿನ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ವೀರಶೈವ ಲಿಂಗಾಯತ ಸಮಾಜದ ಮಠ, ಮಂದಿರಗಳು ತನ್ನದೇ ಆದ ಕೊಡುಗೆಗಳನ್ನು ನೀಡಿವೆ’ ಎಂದು ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಉಪಾಧಕ್ಷರೂ ಆಗಿರುವ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಹೇಳಿದರು.

ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಬುಧವಾರ ನಡೆದ ಮಸ್ಕಿ ಕ್ಷೇತ್ರದ 14 ಒಳ ಪಂಗಡಗಳ ನ್ನೊಳಗೊಂಡ ವೀರಶೈವ ಲಿಂಗಾಯತ ಸಮಾಜದ ಪ್ರಥಮ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

‘ಲಿಂಗಾಯತ ಎಂದು ಹೇಳಿಕೊಳ್ಳಲು‌ ನಾವು ಯಾರಿಗೂ ಹೆದರಬೇಕಿಲ್ಲ. ಎಲ್ಲರನ್ನೂ ಅಪ್ಪಿಕೊಳ್ಳುವ ಸಮಾಜ ಯಾವುದಾದರೂ ಇದ್ದರೆ ಅದು ವೀರಶೈವ ಲಿಂಗಾಯತ ಸಮಾಜ’ ಎಂದರು.

ADVERTISEMENT

‘ಸಮಾಜದ ಯುವಕರು ಸಾಮಾಜಿಕ ಜಾಲತಾಣಗಳಿಂದ ಹೊರಬಂದು ಧರ್ಮದ ಕಡೆ ಗಮನಕೊಡಬೇಕು. ವೀರಶೈವ ಲಿಂಗಾಯತಕ್ಕೆ ತನ್ನದೇ ಆದ ಇತಿಹಾಸ ಇದೆ’ ಎಂದು ಹೇಳಿದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ಮಾತನಾಡಿ,‘ವೀರಶೈವ ಲಿಂಗಾಯತ ಸಮಾಜಕ್ಕೆ ಸಾವಿರ ವರ್ಷಗಳ ಇತಿಹಾಸ ಇದೆ. ಸಮಾಜವನ್ನು ಗಟ್ಟಿಗೊಳಿಸಬೇಕಾದರೆ ಎಲ್ಲಾ ಒಳ ಪಂಗಡಗಳನ್ನು ಒಗ್ಗೂಡಿಸುವುದು ಅವಶ್ಯ. ಈ ನಿಟ್ಟಿನಲ್ಲಿ ಮಸ್ಕಿಯ ಈ ಸಭೆ ರಾಜ್ಯಕ್ಕೆ ದಿಕ್ಸೂಚಿಯಾಗಲಿದೆ’ ಎಂದರು.

ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿ,‘ವೀರಶೈವ ಸಮಾಜವು ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಹಕ್ಕು ಪಡೆಯಬೇಕಾಗಿದೆ. ವೀರಶೈವ ಸಮಾಜ ಪ್ರತಿಯೊಬ್ಬರಿಗೂ ಸಹಾಯ ಮಾಡುವ ಸಮಾಜವಾಗಿದೆ’ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮನೋಹರ ಮಸ್ಕಿ ಮಾತನಾಡಿ,‘ಒಗ್ಗಟ್ಟಿನಲ್ಲಿ ಬಲವಿದೆ ಎಂಬುದಕ್ಕೆ ಈ ಸಭೆ ಸಾಕ್ಷಿಯಾಗಿದೆ. ಬಸವಣ್ಣನವರು ಧರ್ಮದ ಜೊತೆಗೆ ಸಮಾಜ ಸುಧಾರಕರಾಗಿದ್ದರು’ ಎಂದು ಹೇಳಿದರು.

ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಮಿರ್ಜಾಪುರ ಮಾತನಾಡಿದರು.

ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಮಾತನಾಡಿ ಸಮಾವೇಶದ ಉದ್ದೇಶಗಳನ್ನು ವಿವರಿಸಿದರು.

ಬಿಚ್ಚಾಲಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ತುರ್ವಿಹಾಳದ ಅಮರಗುಂಡ ಸ್ವಾಮೀಜಿ, ಬಳಗಾನೂರಿನ ಸಿದ್ದಬಸವ ಸ್ವಾಮೀಜಿ, ಸಂತೆಕೆಲ್ಲೂರಿನ ಮಹಾಂತ ಸ್ವಾಮೀಜಿ, ಗುಂಡಯ್ಯ ಸ್ವಾಮೀಜಿ, ಮೌನೇಶ ತಾತ ಜಂಗಮರಳ್ಳಿ ಹಾಜರಿದ್ದರು.

ಸೂಗಣ್ಣ ಬಾಳೇಕಾಯಿ ಸ್ವಾಗತಿಸಿದರು. ಶಿವಾಚಾರ್ಯ ಶಾಸ್ತ್ರಿ, ವೀರೇಶ ಪಾಟೀಲ ನಿರೂಪಿಸಿದರು.

14 ಒಳ ಪಂಗಡಗಳ ಜನರು ಭಾಗಿ 3 ಸಾವಿರಕ್ಕೂ ಹೆಚ್ಚು ಜನ ಉಪಸ್ಥಿತಿ ಹಳ್ಳಿಗಳಿಂದ ಬಂದ ಸಮಾಜದವರು

ಬಸವಣ್ಣನವರ ವಚನಗಳಲ್ಲಿ ಎಲ್ಲಿಯೂ ಲಿಂಗಾಯತ ಶಬ್ಧ ಬಳಕೆಯಾಗಿದ್ದು ನನಗೆ ಕಂಡುಬಂದಿಲ್ಲ. ಅವರು ಲಿಂಗವನ್ನು ಪೂಜಿಸುವ ಪದ್ಧತಿಯನ್ನು ಸರಳೀಕರಣಗೊಳಿಸುವ ಮೂಲಕ ಸಮಾಜ ಸುಧಾರಣೆಯ ಕ್ರಾಂತಿ ಮಾಡಿದರು
ಮನೋಹರ ಮಸ್ಕಿ ವಿಧಾನ ಪರಿಷತ್ ಮಾಜಿ ಸದಸ್ಯ
‘ಗಣತಿಯಲ್ಲಿ ವೀರಶೈವ ಲಿಂಗಾಯತ ಬರೆಸಿ’
ಅಖಿಲ ಭಾರತ ವೀರಶೈವ ಮಹಾಸಭಾ ಎಲ್ಲರನ್ನೂ ಒಗ್ಗೂಡಿಕೊಂಡು ಹೋಗುವ ಕೆಲಸ‌ ಮಾಡುತ್ತಿದೆ ಎಂದು ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು. ಸಭೆಯಲ್ಲಿ ಪಾಲ್ಗೊಂಡಿದ್ದವರೊಬ್ಬರು ಕೇಳಿದ ಪ್ರಶ್ನೆಗೆ ಸ್ಪಷ್ಟೀಕರಣ ನೀಡಿದ ಅವರು‘ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಡಿಸಲು ಮಹಾಸಭಾ ಹೋರಾಟ ನಡೆಸಿದೆ. ಜಾತಿ ಗಣತಿಯ‌ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಹಾಗೂ ಜಾತಿ ಕಾಲಂನಲ್ಲಿ ತಮ್ಮ ಜಾತಿ ಹೆಸರು ನಮೂದಿಸಬೇಕು ಎಂದು ವೀರಶೈವ ಮಹಾಸಭಾ ತೀರ್ಮಾನಿಸಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.