ADVERTISEMENT

ಬೀನ್ಸ್‌ ₹80, ನುಗ್ಗೆಕಾಯಿ ₹ 400: ಹಬ್ಬಕ್ಕೆ ಹಿಗ್ಗಿದ ಹಿರೇಕಾಯಿ, ಬದನೆಕಾಯಿ

ಚಂದ್ರಕಾಂತ ಮಸಾನಿ
Published 14 ಜನವರಿ 2026, 6:25 IST
Last Updated 14 ಜನವರಿ 2026, 6:25 IST
ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿರುವ ಗ್ರಾಹಕರು
ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿರುವ ಗ್ರಾಹಕರು   

ರಾಯಚೂರು: ಸಂಕ್ರಮಣಕ್ಕೆ ನದಿ ಸ್ನಾನ, ಸಾಮೂಹಿಕ ಭೋಜನವೇ ಪ್ರದಾನ. ಬಹುತೇಕ ಜನ ಮಂತ್ರಾಲಯ, ನಾರದಗಡ್ಡೆ, ದತ್ತಪೀಠ, ತಿಂಥಣಿ, ಚಿಕ್ಕಲಪರವಿ, ದಡೇಸಗೂರಲ್ಲಿ ನದಿ ಸ್ನಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಸಾಮೂಹಿಕ ಭೋಜನಕ್ಕೂ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹೀಗಾಗಿ ತರಕಾರಿ ಹೆಚ್ಚಿನ ಬೇಡಿಕೆ ಬಂದು ಸ್ವಲ್ಪ ಮಟ್ಟಿಗೆ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ.

ಹಬ್ಬ ಒಂದು ದಿನ ಬಾಕಿ ಇರುವಾಗಲೇ ತರಕಾರಿ ರಾಜ ಬದನೆಕಾಯಿ ಸೇರಿದಂತೆ ಕೊಂಬಿನ ತರಕಾರಿಗಳು ಬೆಲೆ ಹೆಚ್ಚಿಸಿಕೊಂಡು ಬೀಗುತ್ತಿವೆ. ಪ್ರತಿ ಕ್ವಿಂಟಲ್‌ಗೆ ಬೆಳ್ಳುಳ್ಳಿ, ಮೆಣಸಿನಕಾಯಿ, ಹಿರೇಕಾಯಿ, ಡೊಣಮೆಣಸಿನಕಾಯಿ ಎಲೆಕೋಸು, ಹೂಕೋಸು, ಗಜ್ಜರಿ ₹ 2 ಸಾವಿರ ಹೆಚ್ಚಳವಾಗಿದೆ. ಪ್ರತಿಕ್ವಿಂಟಲ್‌ಗೆ ಬೀನ್ಸ್ ₹ 4 ಸಾವಿರ,ಮಬದನೆಕಾಯಿ ₹ 1 ಸಾವಿರ ಏರಿಕೆಯಾಗಿದೆ. ಬಹುಉಪಯೋಗಿ ನುಗ್ಗೆಕಾಯಿ ದರ ಕಡಿಮೆಯಾಗಿಲ್ಲ. ನುಗ್ಗೆಕಾಯಿ ಬೆಲೆ ಕೇಳಿಯೇ ಗ್ರಾಹಕರು ಬೆಚ್ಚಿ ಬೀಳುವಂತಾಗಿದೆ.

ಬೆಂಡೆಕಾಯಿ, ತೊಂಡೆಕಾಯಿ, ತುಪ್ಪದ ಹಿರೇಕಾಯಿ, ಚವಳೆಕಾಯಿ, ಸೌತೆಕಾಯಿ ಬೆಲೆ ಸ್ಥಿರವಾಗಿದೆ.
ಟೊಮೆಟೊ ಬೆಲೆ ಅಷ್ಟೇ ಒಂದು ಸಾವಿರ ರೂಪಾಯಿ ಇಳಿದಿದೆ. ಹಸಿಹುಣಸೆಕಾಯಿ, ಕಾಡು ನೆಲ್ಲಿಕಾಯಿ ಕುಂಬಳಕಾಯಿ, ಬೂದು ಕುಂಬಳಕಾಯಿ, ಬಟಾಣಿ, ಕಾಳು ಅವರೆಕಾಯಿ ಹಾಗೂ ಸೊಪ್ಪು ಅಧಿಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿದೆ.

ADVERTISEMENT

ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಮೆಂತೆ, ಸಬ್ಬಸಗಿ ಸೊಪ್ಪು ಬಂದಿದೆ. ಆಂಧ್ರಪ್ರದೇಶದ, ತೆಲಂಗಾಣ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ ಸ್ವಲ್ಪ ಎಲೆಕೋಸು, ಹೂಕೋಸು, ಬದನೆಕಾಯಿ, ಅವರೆಕಾಯಿ ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.

‘ಸಂಕ್ರಮಣದ ಪ್ರಯುಕ್ತ ಸಹಜವಾಗಿ ತರಕಾರಿ ಬೆಲೆ ಹೆಚ್ಚಾಗಿದೆ. ಹಬ್ಬಕ್ಕೆ ವಿಶಿಷ್ಠ ತರಕಾರಿ ಖಾದ್ಯ ಸಿದ್ಧ ಪಡಿಸುವ ಕಾರಣ ಬಹುತೇಕ ಎಲ್ಲ ಕಾಳು ತರಕಾರಿ ಹಾಗೂ ಸೊಪ್ಪಿನ ಬೆಲೆಯಲ್ಲಿ ಏರಿಕೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ಶಶಿಕುಮಾರ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.