ADVERTISEMENT

ಸಿಂಧನೂರು | ಸಮಾಜ ಕಲ್ಯಾಣ ಅಧಿಕಾರಿಯಿಂದ ಆದೇಶ ಉಲ್ಲಂಘನೆ: ಆರೋಪ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 16:07 IST
Last Updated 30 ಆಗಸ್ಟ್ 2024, 16:07 IST
ಪಂಪಾಪತಿ ಹಂಚಿನಾಳ
ಪಂಪಾಪತಿ ಹಂಚಿನಾಳ   

ಸಿಂಧನೂರು: ‘ರಾಜ್ಯ ಸರ್ಕಾರ ವರ್ಗಾವಣೆ ಆದೇಶ ಹೊರಡಿಸಿ ಒಂದು ತಿಂಗಳಾದರೂ ಸಿಂಧನೂರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಾ ಆದೇಶ ಉಲ್ಲಂಘಿಸಿದ್ದಾರೆ’ ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಪಂಪಾಪತಿ ಹಂಚಿನಾಳ ಆರೋಪಿಸಿದ್ದಾರೆ.

ಶುಕ್ರವಾರ ಹೇಳಿಕೆ ನೀಡಿರುವ ಅವರು, ‘ಸರ್ಕಾರವು ಈಗಾಗಲೇ ಎಲ್ಲ ಇಲಾಖೆಗಳ ಅಧಿಕಾರಿಗಳ ವರ್ಗಾವಣೆ ಮಾಡಿದ್ದು, ಅದರಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಕೂಡ ವರ್ಗಾವಣೆ ಮಾಡಿದೆ. ಜುಲೈ 7, 2024 ರಂದು ಸರ್ಕಾರ ಹೊರಡಿಸಿದ ಆದೇಶದ ಅನ್ವಯ ಮಾನ್ವಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಅಧೀಕ್ಷಕಿ ಹುದ್ದೆಗೆ ಸಿಂಧನೂರು ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕಿ ಗ್ರೇಡ್‌-2 ಅಧಿಕಾರಿ ವಿಜಯಾ ವರ್ಗಾವಣೆಯಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸಿಂಧನೂರಿನಲ್ಲಿಯೇ ಅಧಿಕಾರ ಮುಂದುವರಿಸಿದ್ದಾರೆ’ ಎಂದು ದೂರಿದ್ದಾರೆ.

ವರ್ಗಾವಣೆಗೊಂಡ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಲು ಸೂಚಿಸಬೇಕಾದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಕಣ್ಣುಮುಚ್ಚಿ ಕುಳಿತುಕೊಂಡಿದ್ದಾರೆ. ಕೂಡಲೇ ವಿಜಯಾ ಅವರು ಮಾನ್ವಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಳ್ಳಬೇಕು. ಸಿಂಧನೂರು ತೊರೆಯಬೇಕು. ಇಲ್ಲದಿದ್ದರೆ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.