ADVERTISEMENT

ಪರಿಶಿಷ್ಟ ಯುವತಿಯ ಕೊಲೆ: ಕಠಿಣ ಶಿಕ್ಷೆಗೆ ಒತ್ತಾಯ

ದಲಿತಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 14:02 IST
Last Updated 5 ಸೆಪ್ಟೆಂಬರ್ 2024, 14:02 IST
ಸಿಂಧನೂರಿನ ದಲಿತಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ತಹಶೀಲ್ದಾರ್ ಅರುಣ್ ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಸಿಂಧನೂರಿನ ದಲಿತಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ತಹಶೀಲ್ದಾರ್ ಅರುಣ್ ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಸಿಂಧನೂರು: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ವಿಠಲಾಪುರ ಗ್ರಾಮದಲ್ಲಿ ಅಂತರ್ಜಾತಿ ವಿವಾಹವಾದ ದಲಿತ ಯುವತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ದಲಿತಪರ ಸಂಘಟನೆಗಳ ಒಕ್ಕೂಟ ಗುರುವಾರ ಇಲ್ಲಿನ ಮಿನಿವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿತು.

ದಲಿತ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಘಟಕದ ಸಂಚಾಲಕ ಮೌನೇಶ ಜಾಲವಾಡಗಿ ಮಾತನಾಡಿ,‘ಈ ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳೇ ಗತಿಸಿದರೂ ಇನ್ನುವರೆಗೂ ದಲಿತರಿಗೆ, ಶೋಷಿತರಿಗೆ ನೈಜವಾದ ಸ್ವಾತಂತ್ರ್ಯ ದೊರಕಿಲ್ಲ. ಈ ಘಟನೆ ಇಡೀ ಮಾನವ ಸಮಾಜ ತಲೆತಗ್ಗಿಸುವಂಥ ಹಾಗೂ ನಾಚಿಕೆಗೇಡಿನ ಸಂಗತಿಯಾಗಿದೆ. ಈ ದೇಶದಲ್ಲಿ ಜಾತಿ ವ್ಯವಸ್ಥೆ ಎನ್ನುವುದು ಬಹುದೊಡ್ಡ ಸಾಮಾಜಿಕ ಪಿಡುಗಾಗಿದೆ’ ಎಂದರು.

ಕೊಪ್ಪಳ ಜಿಲ್ಲೆಯ ಸಂಗನಾಳ ಗ್ರಾಮದ ದಲಿತ ಯುವಕ ಯಮನೂರಪ್ಪನ ಕೊಲೆ ಮಾಸುವ ಮುನ್ನವೇ ಆ.29ರಂದು ಗಂಗಾವತಿ ತಾಲ್ಲೂಕಿನ ವಿಠಲಾಪುರ ಗ್ರಾಮದ ದಲಿತ ಸಮುದಾಯದ ಯುವತಿ ಮರಿಯಮ್ಮ (21) ಅವರ ಕೊಲೆಯಾಗಿದೆ. ಈ ಯುವತಿ ಹಾಗೂ ನಾಯಕ ಸಮಾಜದ ಹನುಮಯ್ಯ ಪ್ರೀತಿಸಿ ಮದುವೆಯಾಗಿದ್ದರು. ಯುವತಿಯನ್ನು ಮನೆ ಪಕ್ಕದ ಶೆಡ್‍ನಲ್ಲಿಟ್ಟಿದ್ದರು. ಈಕೆ ಮಾಡಿದ ಅಡುಗೆಯನ್ನು ತಿನ್ನುತ್ತಿರಲಿಲ್ಲ. ಆ.29ರಂದು ಯುವತಿಯನ್ನು ಮನಬಂದಂತೆ ಥಳಿಸಿ, ಅನುಮಾನ ಬಾರದಂತೆ ವಿಷ ಉಣಿಸಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಸಿಪಿಐಎಂಎಲ್ ರೆಡ್‍ಸ್ಟಾರ್ ಸಮಿತಿ ಮುಖಂಡ ಎಂ.ಗಂಗಾಧರ ಮಾತನಾಡಿ,‘ಇಡೀ ಮಾನವ ಸಮಾಜವೇ ತಲೆತಗ್ಗಿಸುವಂಥ ಹೇಯ ಕೃತ್ಯಗಳು ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಕೊಪ್ಪಳ ಚಲೋ ಹೋರಾಟ ಹಮ್ಮಿಕೊಳ್ಳಲಾಗುವುದು. ಯುವತಿಯ ಕೊಲೆಗೆ ಕಾರಣರಾದವರನ್ನು ಗಲ್ಲಿಗೇರಿಸಬೇಕು. ಮೃತ ಕುಟುಂಬಕ್ಕೆ ಸರ್ಕಾರಿ ಸೌಲಭ್ಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಗುರುರಾಜ ಮುಕ್ಕುಂದ, ಶಿವರಾಜ ಉಪ್ಪಲದೊಡ್ಡಿ, ಮುತ್ತು ಸಾಗರ, ನಾಗರಾಜ ಸಾಸಲಮರಿ, ಸಂಗಮೇಶ ಮುಳ್ಳೂರು, ಎಚ್.ಆರ್.ಹೊಸಮನಿ, ಈರಣ್ಣ ಸುಲ್ತಾನಾಪುರ, ಆಲಂಬಾಷಾ ಬೂದಿಹಾಳ, ಮಹೇಶ, ಪಂಪಾಪತಿ ಹಂಚಿನಾಳ, ವೀರೇಶ ಹಂಚಿನಾಳ, ಹನುಮಂತಪ್ಪ ಗೋಡಿಹಾಳ, ಚಿರು ಮರಿಯಪ್ಪ, ಜಂಬಣ್ಣ ಉಪ್ಪಲದೊಡ್ಡಿ, ಮಲ್ಲಿಕಾರ್ಜುನ, ದುರ್ಗೇಶ ಕಲಮಂಗಿ, ಚನ್ನಬಸವ ಯಾಪಲಪರ್ವಿ, ಮುದಿಯಪ್ಪ ಹೊಸಳ್ಳಿ, ಪರಶುರಾಮ ದೀನಸಮುದ್ರ, ಛತ್ರಪ್ಪ ಬಸಾಪುರ, ಯಮನೂರ ಬಸಾಪುರ, ಯರಿಸ್ವಾಮಿ ಹಾಗೂ ಬಸವರಾಜ ತುರ್ವಿಹಾಳ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.