ರಾಯಚೂರು: ‘ಮತದಾನ ಬಹಳ ಅಮೂಲ್ಯವಾದುದು. ಅದನ್ನು ಬೇಕಾಬಿಟ್ಟಿಯಾಗಿ ಚಲಾಯಿಸಬಾರದು. ತಪ್ಪು ಮತದಾನ ಅಸಮರ್ಥ ನಾಯಕನ ಆಯ್ಕೆಗೆ ಕಾರಣವಾಗುತ್ತದೆ‘ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಅಭಿಪ್ರಾಯಪಟ್ಟರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಲಾಗಿದ್ದ ಪ್ರತಿಜ್ಞಾ ವಿಧಿ ಸ್ವೀಕರಿಸಿ ಅವರು ಮಾತನಾಡಿದರು.
‘ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಮತದಾನವನ್ನು ಪಾವಿತ್ರ್ಯತೆಗೆ ಹೋಲಿಸುತ್ತಾರೆ. ಈ ಪವಿತ್ರ ಮತಗಳನ್ನು ಅರ್ಹರಿಗೆ ಚಲಾಯಿಸಿ ಚುನಾಯಿಸಬೇಕು. ಪ್ರಜ್ಞಾವಂತರು ಎನ್ನಿಸಿಕೊಂಡ ಮಹಾನಗರಗಳ ಬಹುತೇಕ ನಾಗರಿಕರು ಮತದಾನ ಮಾಡುತ್ತಿಲ್ಲ. ಅಲ್ಲಿ ಶೇ.30ರಷ್ಟು ಮತದಾನವಾದ ವರದಿಗಳಿವೆ. ಮತದಾನ ನಮ್ಮ ದೇಶದ ಭವಿಷ್ಯವನ್ನು ರೂಪಿಸುತ್ತದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತದೆ’ ಎಂದರು.
ಕುಲಸಚಿವ (ಆಡಳಿತ) ಎ.ಚೆನ್ನಪ್ಪ ಮಾತನಾಡಿ, ‘ಮತದಾನ ಕುರಿತು ಯುವಜನರಲ್ಲಿ ಪ್ರಜ್ಞೆ ಮೂಡಿಸಬೇಕು. ಹೊಸ ಮತದಾರರು ಮತ ಚಲಾಯಿಸುವಂತೆ ಪ್ರೇರೇಪಿಸಬೇಕು. ನಾವು ಒಬ್ಬರು ಮತ ಚಲಾಯಿಸದಿದ್ದರೆ ಏನೂ ಆಗುವದಿಲ್ಲವೆಂಬ ಉದಾಸೀನ ಬೇಡ. ಸಮರ್ಥರು ಚುನಾಯಿತಗೊಳ್ಳಲು ಮತ ಚಲಾಯಿಸಬೇಕು. ಆಸೆ, ಆಮಿಷಗಳಿಗೆ ಬಲಿಯಾಗದೆ ಮತ ಹಾಕಿ. ಎಲ್ಲೆಡೆ ಮತದಾರರ ಸಾಕ್ಷರತಾ ಕ್ಲಬ್‍ಗಳು ಕಾರ್ಯನಿರ್ವಹಿಸುವಂತಾಗಬೇಕು’ ಎಂದರು.
ಉಪಕುಲಸಚಿವ ಡಾ.ಕೆ.ವೆಂಕಟೇಶ್ ಮಾತನಾಡಿ, ಪ್ರಜೆಗಳು ದೇಶದ ಪ್ರಾಣಧಾತು ಇದ್ದಂತೆ. ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಆ ದೇಶದ ಮೌಲ್ಯ ನಿರ್ಣಯವಾಗುತ್ತದೆ. ವಾಸ್ತವವಾಗಿ ಹಳ್ಳಿಗರು, ಅನಕ್ಷರಸ್ಥರು, ಆದಿವಾಸಿಗಳೇ ಹೆಚ್ಚು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಾಗೆ ನೋಡಿದರೆ ನಗರವಾಸಿಗಳೇ ಹೆಚ್ಚು ಪಾಲ್ಗೊಳ್ಳುತ್ತಿಲ್ಲ. ಜೊತೆಗೆ ಹಣ, ಅಧಿಕಾರದ ಬಲದಿಂದ ಚುನಾವಣೆಗಳು ನಡೆಯುತ್ತಿವೆ. ಇದಕ್ಕೆ ತದ್ವಿರುದ್ಧವಾಗಿ ಶಾಂತವೇರಿ ಗೋಪಾಲಗೌಡರಂಥವರನ್ನು ಸ್ವತಃ ಜನರೇ ಮುಂದಾಗಿ ಗೆಲ್ಲಿಸಿದರು. ಇದು ಸಜ್ಜನರನ್ನು ಚುನಾಯಿಸುವ ಶಕ್ತಿ ಮತದಾನಕ್ಕಿದೆ ಎಂಬುದನ್ನು ದೃಢಪಡಿಸುತ್ತದೆ’ ಎಂದು ಹೇಳಿದರು.
ಡೀನ್‍ರಾದ ಪ್ರೊ.ಪಾರ್ವತಿ ಸಿ.ಎಸ್., ಪ್ರೊ. ಪಿ. ಭಾಸ್ಕರ್, ಪ್ರೊ.ಸುಯಮೀಂದ್ರ ಕುಲಕರ್ಣಿ, ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಜಿ.ಎಸ್.ಬಿರಾದಾರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಉಪನ್ಯಾಸಕ ಅನಿಲ ಅಪ್ರಾಳ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.