
ಹಟ್ಟಿ ಚಿನ್ನದ ಗಣಿ (ರಾಯಚೂರು ಜಿಲ್ಲೆ): ಸಮೀಪದ ವಂದ್ಲಿ ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿ ಹಾಗೂ ಶೌಚಾಲಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದು, 200 ಮಕ್ಕಳು ಹಾಗೂ ಶಿಕ್ಷಕರಿಗೆ ಒಂದೇ ಒಂದು ಶೌಚಾಲಯವೂ ಇಲ್ಲ!
1959ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಸದ್ಯ 1ರಿಂದ 7ನೇ ತರಗತಿ ವರೆಗೆ 108 ವಿದ್ಯಾರ್ಥಿನಿಯರು ಹಾಗೂ 92 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 4 ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಇದರಲ್ಲಿ ನಾಲ್ವರು ಶಿಕ್ಷಕಿಯರಿದ್ದು ಅವರಿಗೂ ಶೌಚಾಲಯದ ವ್ಯವಸ್ಥೆ ಇಲ್ಲ. ಹೀಗಾಗಿ ಮಕ್ಕಳು, ಶಿಕ್ಷಕರು ಸಹಜವಾಗಿ ನಿಸರ್ಗ ಕರೆಗೆ ಬಯಲನ್ನೇ ಅವಲಂಭಿಸಿದ್ದಾರೆ.
ಮಧ್ಯಾಹ್ನ ಊಟ ಮಾಡಿದ ತಟ್ಟೆ ತೊಳೆಯಲು ಮನೆಯಿಂದಲೇ ನೀರು ತರಬೇಕು. ಇಲ್ಲದಿದ್ದರೆ ಗ್ರಾಮದ ಹಳೆಯ ಬಾವಿಯ ನೀರೇ ಆಧಾರ. ಕೂಡಲು ಆಸನಗಳಿಲ್ಲ, ಮಳೆ ಬಂದರೆ ಶಾಲೆಯ ಚಾವಣಿ ಸೋರುತ್ತದೆ.
2021–22ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಲ್ಲಿ ಎರಡು ಕೊಠಡಿ ನಿರ್ಮಿಸಲಾಗಿದೆ. ಒಂದರಲ್ಲಿ 1ರಿಂದ 3 ಮತ್ತು ಇನ್ನೊಂದು ಕೋಣೆಯಲ್ಲಿ 4ರಿಂದ 6ನೇ ತರಗತಿ, ಹಳೆಯ ದಾಸ್ತಾನು ಕೊಠಡಿಯಲ್ಲಿ 7ನೇ ತರಗತಿಯ ಮಕ್ಕಳಿಗೆ ಪಾಠ ಹೇಳಲಾಗುತ್ತದೆ. ಅಲ್ಲದೆ ಇದೇ ಕೋಣೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲಾಗುತ್ತದೆ.
‘ವಂದ್ಲಿ ಹೊಸೂರು ಗ್ರಾಮದಲ್ಲಿ 4 ಜನ ಗ್ರಾ.ಪಂ. ಸದಸ್ಯರಿದ್ದರೂ ಶಾಲೆಗೆ ಬಂದು ಮಕ್ಕಳ ಸಮಸ್ಯೆ ಕೇಳುವುದಿಲ್ಲ. ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದಿಸುತ್ತಿಲ್ಲ’ ಎನ್ನುತ್ತಾರೆ ಮಕ್ಕಳ ಪಾಲಕರು.
‘ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು. ನಿರ್ಲಕ್ಷ್ಯ ಮಾಡಿದರೆ ಹೋರಾಟ ನಡೆಸಬೇಕಾಗುತ್ತದೆ’ ವಿದ್ಯಾರ್ಥಿ ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಶಾಲೆಯ ಆವರಣದ ಸುತ್ತ ಅಸ್ವಚ್ಛತೆ ತಾಂಡವವಾಡುತ್ತಿದೆ. ವಿದ್ಯಾರ್ಥಿಗಳು ಜೀವಭಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಕನಿಷ್ಠ ಸೌಲಭ್ಯಗಳನ್ನಾದರೂ ನೀಡಲಿ- ಶಿವರಾಜ ಗ್ರಾಮಸ್ಧ
ನೀರಘಂಟಿಯ ಬೇಜವಾಬ್ದಾರಿಯಿಂದ ಶಾಲೆಯ ಮಕ್ಕಳಿಗೆ ಕುಡಿಯವ ನೀರಿನ ಸಮಸ್ಯೆ ಎದುರಾಗಿದೆ. ಸಮಸ್ಯೆ ಬಗೆಹರಿಸಲು ಶ್ರಮಿಸಲಾಗುವುದು - ಸಿದ್ದಣ್ಣ ನಾಯಕ ವಂದ್ಲಿ ಹೊಸೂರು ಗ್ರಾ.ಪಂ. ಸದಸ್ಯ
ಕುಡಿಯುವ ನೀರು ಶೌಚಾಲಯ ಹಾಗೂ ಇತರೆ ಸಮಸ್ಯೆ ಬಗೆಹರಿಸಿ ಎಂದು ಮನವಿ ಪತ್ರ ಸಲ್ಲಿಸಿದರು ಗ್ರಾ.ಪಂ ಆಡಳಿತ ಸ್ಫಂದಿಸುತ್ತಿಲ್ಲ- ವಿಜಯಕುಮಾರ ಮುಖ್ಯ ಶಿಕ್ಷಕ ವಂದ್ಲಿ ಹೊಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.