ADVERTISEMENT

ಮಸ್ಕಿ: ದುರ್ವಾಸನೆ ಮಧ್ಯೆ ಬದುಕುವ ಅನಿವಾರ್ಯತೆ

​ಪ್ರಜಾವಾಣಿ ವಾರ್ತೆ
Published 2 ಮೇ 2021, 13:54 IST
Last Updated 2 ಮೇ 2021, 13:54 IST
ಮಸ್ಕಿಯ ಸಂತೆ ಬಜಾರ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲಿ ಕಸ ಹಾಕಲಾಗಿದೆ
ಮಸ್ಕಿಯ ಸಂತೆ ಬಜಾರ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲಿ ಕಸ ಹಾಕಲಾಗಿದೆ   

ಮಸ್ಕಿ: ತಿಪ್ಪೆಗುಂಡಿ ಹಾಗೂ ಶೌಚಾಲಯದ ವಾಸನೆ ಮಧ್ಯೆ ಬದುಕಬೇಕಿದೆ. ರೋಗ ಬಂದರೆ ಯಾರು ಜವಾಬ್ದಾರರು?...

ಪಟ್ಟಣದ ಅಶೋಕ ವೃತ್ತದಿಂದ ಸಂತೆ ಬಜಾರ್‌ಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್‌ ರಸ್ತೆಯ ಅಕ್ಕಪಕ್ಕದಲ್ಲಿ ವಾಸವಾಗಿರುವ ಜನರ ಪ್ರಶ್ನೆ ಇದು.

ರಸ್ತೆ ಪಕ್ಕದಲ್ಲಿನ ದರ್ಗಾ ಬಳಿಯ ಹಳ್ಳದ ದಂಡೆಯ ಮೇಲೆ ಸುತ್ತಮುತ್ತಲಿನ ಜನ ತ್ಯಾಜ್ಯ ಎಸೆಯುತ್ತಾರೆ. ಅದು ಕೊಳೆತು ನಾರುತ್ತದೆ. ಜನರು ಇದೇ ಜಾಗದಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಾರೆ. ಇದು ಹಂದಿಗಳ ತಾಣವಾಗಿ ಪರಿವರ್ತನೆಯಾಗಿದೆ. ದುರ್ವಾಸನೆಯಿಂದ ರೋಗ ಭೀತಿಯಲ್ಲಿ ಬದುಕುವಂತಾಗಿದೆ. ರಾತ್ರಿಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ ಹೆಚ್ಚುತ್ತದೆ ಎಂದು ನಿವಾಸಿಗಳು ದೂರುತ್ತಾರೆ.

ADVERTISEMENT

ಇದೇ ರಸ್ತೆಯ ಮತ್ತೊಂದು ಭಾಗದಲ್ಲಿ ಮಹಿಳಾ ಶೌಚಾಲಯ ಇದೆ. ಅದು ಶಿಥಿಲಗೊಂಡಿದೆ. ನೀರಿನ ವ್ಯವಸ್ಥೆ ಇಲ್ಲ. ಅದನ್ನು ಕೆಡವಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಟೆಂಡರ್ ಕರೆದು ವರ್ಷಗಳೇ ಹಲವು ಕಳೆದಿವೆ. ಅದು ಅನುಷ್ಠಾನಕ್ಕೆ ಬಾರದ ಕಾರಣ ಮಹಿಳೆಯರು ಅನಿವಾರ್ಯವಾಗಿ ಇದೇ ಶೌಚಾಲಯ ಬಳಕೆ ಮಾಡುತ್ತಿದ್ದಾರೆ.

‘ಸಂತೆ ಬಜಾರ್‌ಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್‌ ರಸ್ತೆಯ ಮಧ್ಯಭಾಗದಲ್ಲಿಯೇ ಕಸದ ರಾಶಿ, ಮರಳು ಹಾಕಲಾಗಿದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನಗಳು ತಿರುಗಾಡದಂಥ ಸ್ಥಿತಿ ನಿರ್ಮಾಣವಾಗಿದೆ. ಪುರಸಭೆ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.