ADVERTISEMENT

ಹೊಳೆ ತುಂಬಿದರೆ, ಮಳೆಯಾದರೆ ರಾಯಚೂರು ನಗರದಲ್ಲಿ ರಾಡಿ ನೀರೇ ಗತಿ!

ನೀರು ಶುದ್ಧೀಕರಣ ಘಟಕಗಳಿದ್ದರೂ ನೀರಿನ ಕಲ್ಮಶ ಕಡಿಮೆಯಾಗಿಲ್ಲ: ಆರೋಪ

ನಾಗರಾಜ ಚಿನಗುಂಡಿ
Published 15 ಜುಲೈ 2022, 19:30 IST
Last Updated 15 ಜುಲೈ 2022, 19:30 IST
ರಾಯಚೂರಿನ 14 ವಾರ್ಡ್‌ಗಳಿಗೆ ಕುಡಿಯುವ ನೀರು ಸಂಗ್ರಹಿಸುವ ರಾಂಪೂರ ಕೆರೆಯ ನೋಟ
ರಾಯಚೂರಿನ 14 ವಾರ್ಡ್‌ಗಳಿಗೆ ಕುಡಿಯುವ ನೀರು ಸಂಗ್ರಹಿಸುವ ರಾಂಪೂರ ಕೆರೆಯ ನೋಟ   

ರಾಯಚೂರು: ನಗರದಲ್ಲಿ ಸರಬರಾಜು ಆಗುವ ನೀರಿನಿಂದಲೇ ನದಿಗೆ ಪ್ರವಾಹ ಬಂದಿರುವುದನ್ನು ಮತ್ತು ಕೆರೆ ಭಾಗದಲ್ಲಿ ಮಳೆ ಆಗಿರುವುದನ್ನು ಜನರು ತಿಳಿದುಕೊಳ್ಳುತ್ತಾರೆ!

ಕೃಷ್ಣಾನದಿ ನೀರು ಸರಬರಾಜು ಇರುವ 21 ವಾರ್ಡ್‌ಗಳಲ್ಲಿ ಜುಲೈ ಕೊನೆಯ ವಾರದಿಂದ ಸೆಪ್ಟೆಂಬರ್‌ವರೆಗೂ ಕೆಂಪುಮಣ್ಣು ಮಿಶ್ರಿತ ರಾಡಿ ನೀರು ಪೂರೈಕೆಯಾಗುವುದು ವಾಡಿಕೆ. ರಾಂಪೂರ ಕೆರೆಯಿಂದ ಬರುವ ನೀರು ಕೂಡಾ ಮಳೆಯಿಂದಾಗಿ ಕೊಳೆ ಆಗಿರುವುದನ್ನು ಜನರು ಗುರುತಿಸುತ್ತಾರೆ. ನೀರು ಶುದ್ಧೀಕರಣ ಘಟಕಗಳಿದ್ದರೂ ನೀರಿನ ಕಲ್ಮಶ ಏಕೆ ಹೋಗಿಲ್ಲ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಹಲವು ವರ್ಷಗಳಿಂದ ಪ್ರಶ್ನೆಯಾಗಿಯೇ ಉಳಿದಿದೆ.

ಶುದ್ಧೀಕರಣ ಘಟಕದಲ್ಲಿ ಮಳೆನೀರು ಮಿಶ್ರಣವಾಗಿದೆಯೋ ಅಥವಾ ಪೈಪ್‌ಲೈನ್‌ ಸೋರಿಕೆಯಲ್ಲಿ ಮಳೆನೀರು ಮಿಶ್ರಣವಾಗುತ್ತಿದೆಯೋ ಎನ್ನುವುದು ನಿಗೂಢವಾಗಿದೆ. ಒಟ್ಟಾರೆ, ಮಳೆಗಾಲದಲ್ಲಿ ಮನೆಗಳಿಗೆ ತಲುಪುವ ನೀರು ಮಾತ್ರ ಬೇಸಿಗೆ, ಚಳಿಗಾಲದಲ್ಲಿ ಇದ್ದಂತೆ ಇರುವುದಿಲ್ಲ ಎನ್ನುವುದು ಸತ್ಯ.

ADVERTISEMENT

‘ಮಳೆಗಾಲದಲ್ಲಿ ಇಂಥ ನೀರು ಸರಬರಾಜು ಮಾಡುವುದು ಅನಿವಾರ್ಯ. ನದಿಗೆ ಹೊಸನೀರು ಹರಿದು ಬರುವುದರಿಂದ ಬಣ್ಣ ಬದಲಾವಣೆ ಆಗಿರುತ್ತದೆ. ಆದರೂ ನೀರನ್ನು ಕಾಯಿಸಿ ಆರಿಸಿ ಕುಡಿಯುವಂತೆ ಜನರಿಗೆ ಸೂಚನೆ ನೀಡಲಾಗುತ್ತದೆ‘ ಎನ್ನುವುದು ನಗರಸಭೆ ಅಧಿಕಾರಿಗಳ ವಿವರಣೆ.

ಶುದ್ಧ ನೀರಿನ ಘಟಕದ ಸಿಬ್ಬಂದಿ ಹೇಳುವ ಪ್ರಕಾರ, ‘ಮಳೆಗಾಲ ಪೂರ್ವದಲ್ಲಿ ಯಾವ ರೀತಿ ಶುದ್ಧೀಕರಣ ಕಾರ್ಯ ಅನುಸರಿಸಲಾಗುತ್ತದೆಯೋ ಅದನ್ನೇ ಮಳೆಗಾಲದಲ್ಲೂ ಮಾಡುತ್ತೇವೆ. ಆದರೂ ನೀರಿನ ಬಣ್ಣ ಬದಲಾಗುವುದಿಲ್ಲ. ನೀರನ್ನು ಒಂದು ತಾಸು ಬೆಡ್ಡಿಂಗ್‌ ಮಾಡಲಾಗುತ್ತದೆ. ಆನಂತರ ಮದರ್‌ ಟ್ಯಾಂಕ್‌ಗೆ ಸರಬರಾಜು ಮಾಡಿ, ಅಲ್ಲಿಂದ ಪಂಪ್‌ ಮಾಡಲಾಗುವುದು’ ಎನ್ನುವುದು ಅವರ ವಿಶ್ಲೇಷಣೆ.

ಕಚ್ಚಾನೀರನ್ನು ಶುದ್ಧೀಕರಣ ಘಟಕಕ್ಕೆ ಪೂರೈಸುವ ಮೊದಲು ಪರೀಕ್ಷೆ ಮಾಡುವ ವ್ಯವಸ್ಥೆ ಇನ್ನೂ ಅಳವಡಿಸಿಲ್ಲ. ಹೀಗಾಗಿ ನೀರು ಎಷ್ಟೇ ಕೊಳಕಾಗಿದ್ದರೂ ಅದೇ ವೇಗದಲ್ಲೇ ಶುದ್ಧೀಕರಣ ಘಟಕದ ಪ್ರಕ್ರಿಯೆಗಳನ್ನು ಮಾಡುವುದು ಸಿಬ್ಬಂದಿಗೆ ರೂಢಿಸಲಾಗಿದೆ. ಈ ಬಗ್ಗೆ ವೈಜ್ಞಾನಿಕವಾಗಿ ಸಲಹೆ ಸೂಚನೆ ಕೊಡುವುದಕ್ಕೂ ವ್ಯವಸ್ಥೆ ಇಲ್ಲ. ರಾಂಪೂರ ಮತ್ತು ಚಿಕ್ಕಸುಗೂರು ಶುದ್ಧೀಕರಣ ಘಟಕಗಳಲ್ಲಿ ಪಾಳಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಯಾವುದೇ ತರಬೇತಿ ಇಲ್ಲ. ನಿರ್ವಹಣೆ ಮೇಲುಸ್ತುವಾರಿ ವಹಿಸಿಕೊಂಡವರು ಕೂಡಾ ವೈಜ್ಞಾನಿಕ ನೀರಿನ ಶುದ್ಧತೆಗೆ ಮುಂದಾಗುತ್ತಿಲ್ಲ ಎನ್ನುವುದನ್ನು ಮೇಲ್ನೊಟದಲ್ಲೇ ಗುರುತಿಸಬಹುದಾಗಿದೆ.

ಈಚೆಗೆ ನಡೆದ ಸಾಮೂಹಿಕ ವಾಂತಿಭೇದಿ ಪ್ರಕರಣದಿಂದ ಎಚ್ಚೆತ್ತುಕೊಂಡ ನಗರಸಭೆಯಿಂದ ಕೆಲವೊಂದು ಬದಲಾವಣೆ ತರಲಾಗಿದೆ. ಆದರೆ, ಬದಲಾವಣೆಗೆ ಯಾವುದೇ ವೈಜ್ಞಾನಿಕ ತಳಹದಿ ಅನುಸರಿಸಿಲ್ಲ. ಶುದ್ಧೀಕರಣ ಘಟಕದಿಂದ ನೀರು ಬಿಡುವಾಗ ಪ್ರತಿದಿನ ನೀರಿನ ಸ್ಯಾಂಪಲ್‌ ಸಂಗ್ರಹಿಸಿ ಅದನ್ನು ಪರೀಕ್ಷೆ ಮಾಡುವ ವ್ಯವಸ್ಥೆಯನ್ನು ಜಿಲ್ಲಾ ಆರೋಗ್ಯ ಇಲಾಖೆ ಮುಂದುವರಿಸಿದೆ. ಆದರೆ ಮನೆಗಳಿಗೆ ನೀರು ತಲುಪಿದಾಗ ಯಾವ ಗುಣಮದಲ್ಲಿ ಇರುತ್ತದೆ ಎನ್ನುವುದು ನಿಯಮಿತವಾಗಿ ಪರೀಕ್ಷೆ ಆಗುವುದಿಲ್ಲ. ಪ್ರತಿ ವಾರ್ಡ್‌ಗೆ ಕೆಲವು ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡಿ, ನಗರಸಭೆಗೆ ವರದಿ ನೀಡಲಾಗುತ್ತಿದೆ. ಆದರೆ, ಸಮಸ್ಯೆ ಇರುವ ತಾಣಗಳಿಗೆ ಹೋಗಿ ನೀರಿನ ಸ್ಯಾಂಪಲ್‌ ಪಡೆದುಕೊಂಡು ಪರೀಕ್ಷೆ ಮಾಡುವುದಕ್ಕೆ ಜಿಲ್ಲಾ ಆರೋಗ್ಯ ಇಲಾಖೆಯೂ ಮುಂದಾಗುತ್ತಿಲ್ಲ.

**

ಕಳೆದ ಜೂನ್‌ವರೆಗೂ ನಗರಸಭೆ ನೀರನ್ನೇ ಕುಡಿಯುತ್ತಿದ್ದೆ. ನನಗೂ ವಾಂತಿಭೇದಿಯಾಗಿ ಸಾಕಷ್ಟು ಕಷ್ಟಪಟ್ಟಿದ್ದೇನೆ. ಕ್ಯಾನ್‌ ನೀರಿನಿಂದ ಕೈ, ಕಾಲು ನೋವು ಬಂದರೂ ಪರವಾಗಿಲ್ಲ, ಅದನ್ನೇ ಕುಡಿಯುತ್ತಿದ್ದೇನೆ.
–ವಿಜಯಕುಮಾರ್‌, ನಿವೃತ್ತ ರೈಲ್ವೆ ಸಿಬ್ಬಂದಿ, ರಾಗಿಮಾನಗುಡ್ಡ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.