ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣದ ಕೆಲವು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ನಿವಾಸಿಗಳು ಸ್ಧಳೀಯ ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಟ್ಟಿ ಪಟ್ಟಣದಲ್ಲಿ ಒಟ್ಟು 13 ವಾರ್ಡ್‌ಗಳಿದ್ದು 13 ಸದಸ್ಯರು ಇದ್ದಾರೆ. 20 ಸಾವಿರ ಜನಸಂಖ್ಯೆ ಇದ್ದು, ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ನೀರಿಗಾಗಿ, ಮಕ್ಕಳು ಮಹಿಳೆಯರು, ಕೆಲಸ ಬಿಟ್ಟು ಬೇರೆ ಓಣಿಗಳಿಗೆ ನಿತ್ಯ ಅಲೆಯಬೇಕಾದ ಪರಿಸ್ಧಿತಿ ಇದೆ. ಜನಪ್ರತಿನಿಧಿಗಳಿಗೆ ತಿಳಿಸಿದರೂ ನಮ್ಮ ಸಮಸ್ಯೆಗಳಿಗೆ ಸ್ಫಂದಿಸುತ್ತಿಲ್ಲ, ಅಧಿಕಾರಿಗಳ ಗಮನಕ್ಕೂ ತಂದರು ಇತ್ತ ಕಡೆ ಗಮನಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಇಲ್ಲಿನ ಜನ ದೂರಿದ್ದಾರೆ.
ಹೋರಾಟ ಮಾಡಿ ಕುಡಿಯುವ ನೀರು ಪಡೆಯಬೇಕಾದ ಪರಿಸ್ಧಿತಿ ಹಟ್ಟಿ ಪಟ್ಟಣದಲ್ಲಿ ನಿರ್ಮಾಣವಾಗಿದೆ. ಹೋರಾಟ ಮಾಡಿದ 2-3 ದಿನ ಮಾತ್ರ ನೀರು ಪೂರೈಕೆ ಮಾಡುತ್ತಾರೆ. ಮತ್ತೆ, ಅದೆ ಹಾಡು, ಅದೇ ರಾಗ ಎಂಬಂತೆ ನೀರಿನ ಸಮಸ್ಯೆ ಎದುರಾಗುತ್ತದೆ. ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ ಎನ್ನುತ್ತಾರೆ ಇಲ್ಲಿನ ಮಹಿಳೆಯರು.
’ಕುಡಿಯುವ ನೀರು ಒದಗಿಸುತ್ತೇನೆ ಎಂದು ಓಟು ಪಡೆದವರು ಜನರ ಸಮಸ್ಯೆಗಳನ್ನು ಆಲಿಸುವಲ್ಲಿ ವಿಫಲರಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಪ.ಪಂ ಕಚೇರಿಗೆ ಬೀಗ ಹಾಕಿ ಹೋರಾಟ ನಡೆಸಬೇಕಾಗುತ್ತದೆ ಎಂದು ಕರವೇ, ಶಿವರಾಮೇಗೌಡ ಬಣದ ಅಧ್ಯಕ್ಷ ಮೌನೇಶ ಕಾಕಾನಗರ ಎಚ್ಚರಿಕೆ ನೀಡಿದ್ದಾರೆ.
ಹಟ್ಟಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು ಜನರ ಸಮಸ್ಯೆಯನ್ನು ಅಧಿಕಾರಿಗಳು ಪರಿಹರಿಸಬೇಕು
ಬಸವರಾಜ ಪೈ, ಹಟ್ಟಿ ಪಟ್ಟಣ ನಿವಾಸಿ
ಹಟ್ಟಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು
ಕರಿಯಪ್ಪ ಪ.ಪಂ ಮುಖ್ಯಾಧಿಕಾರಿ ಹಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.