ADVERTISEMENT

ಮುದಗಲ್‌: ಕನಸಾಗಿಯೇ ಉಳಿದ ಶುದ್ಧ ನೀರು

ಇನ್ನೂ ಪೂರ್ಣವಾಗದ ನಿರಂತರ ನೀರು ಯೋಜನೆ

ಶರಣ ಪ್ಪ ಆನೆಹೊಸೂರು
Published 28 ಏಪ್ರಿಲ್ 2021, 6:16 IST
Last Updated 28 ಏಪ್ರಿಲ್ 2021, 6:16 IST
ಮುದಗಲ್‌ ಪಟ್ಟಣದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿರುವುದರಿಂದ ನೀರು ಸಂಗ್ರಹ ಸಾಧ್ಯವಾಗದೆ ಸಮಸ್ಯೆಯಾಗಿದೆ
ಮುದಗಲ್‌ ಪಟ್ಟಣದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿರುವುದರಿಂದ ನೀರು ಸಂಗ್ರಹ ಸಾಧ್ಯವಾಗದೆ ಸಮಸ್ಯೆಯಾಗಿದೆ   

ಮುದಗಲ್: ಪಟ್ಟಣದಲ್ಲಿ ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಹೀಗಾಗಿ ಕೆಲವೆಡೆ ನಿರುಪಯುಕ್ತವಾಗಿ ನಿಂತಿವೆ. ಜನರು ಸಂಕಷ್ಟ ಅನುಭವಿಸುವಂತಾಗಿದ್ದು, ಬೇರೆ ಗ್ರಾಮಗಳಿಂದ ನೀರು ತಂದುಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ಮುದಗಲ್ ಹೋಬಳಿ ವ್ಯಾಪ್ತಿಯಲ್ಲಿ 1.5 ಲಕ್ಷ ಜನಸಂಖ್ಯೆಯಿದ್ದು, 58 ಗ್ರಾಮಗಳು 10 ಕ್ಕೂ ಹೆಚ್ಚು ತಾಂಡಾಗಳಿವೆ. ಒಟ್ಟು 30ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, 10 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದ ಘಟಕಗಳು ವಿವಿಧ ಕಾರಣಗಳಿಂದ ಸ್ಥಗಿತಗೊಂಡಿವೆ. ಬೇಸಿಗೆಯಲ್ಲಿ ನೀರಿನ ಬವಣೆ ಆರಂಭವಾಗಿದೆ.

ADVERTISEMENT

ಮೋಟಾರ್‌ ಪಂಪ್‌ ದುರಸ್ತಿ, ಹಾಳಾದ ಉಪಕರಣಗಳು, ಪೂರೈಕೆಯಾಗದ ನೀರು, ಯಂತ್ರವನ್ನು ಅಳವಡಿಸದೇ ಇರುವುದು, ಒಡೆದಿರುವ ಪೈಪ್‌ಲೈನ್‌... ಹೀಗೆ ನಾನಾ ಕಾರಣಗಳಿಂದಾಗಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಬವಣೆ ಪಡುತ್ತಿದ್ದಾರೆ.

ಮಾಕಾಪುರ, ಪಿಕಳಿಹಾಳ, ಉಳಿಮೇಶ್ವರ, ಆಮದಿಹಾಳ, ಆಶಿಹಾಳ ತಾಂಡಾದಲ್ಲಿ ಶುದ್ಧ ಕುಡಿವ ನೀರಿನ ಘಟಕ ಬಂದ್‌ ಆಗಿವೆ. ಕೆಲವು ಗ್ರಾಮಗಳಲ್ಲಿ ಘಟಕದ ನೀರನ್ನು ಸಮಪರ್ಕವಾಗಿ ಬಳಕೆ ಮಾಡದ ಕಾರಣ ಘಟಕಗಳ ಸ್ಥಾಪನೆ ನಿರರ್ಥಕವಾಗಿದೆ. ಕೆಲವೆಡೆ ನಿರ್ವಹಣೆ ಕೊರತೆಯಿಂದ ಘಟಕಗಳು ಆಗಾಗ್ಗೆ ರಿಪೇರಿಗೆ ಬರುತ್ತಿವೆ. ಕೆಲ ಗ್ರಾಮಗಳಲ್ಲಿ ಪ್ಲೋರೈಡ್ ಯುಕ್ತ ನೀರು ಸೇವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನೀರು ಸೇವಿಸುವುದರಿಂದ ಇಡೀ ಗ್ರಾಮದ ಜನರು ಕೈ-ಕಾಲು ನೋವಿನಿಂದ ಅನಾರೋಗಕ್ಕೆ ತುತ್ತಾಗುತ್ತಿದ್ದಾರೆ.

ನನೆಗುದಿಗೆ ಬಿದ್ದ ಯೋಜನೆ:ಮುದಗಲ್ ಪಟ್ಟಣದಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಯಮಿತ ಸಂಸ್ಥೆ ಅನುದಾನದಲ್ಲಿ ಮತ್ತು ಪುರಸಭೆ ವತಿಯಿಂದ ಮುದಗಲ್ ಪಟ್ಟಣಕ್ಕೆ ನಿರಂತರ ನೀರು ಸರಬರಾಜು ಮಾಡುವ ನೀರಿನ ಟ್ಯಾಂಕ್ ಪೂರ್ಣಗೊಳ್ಳದೇ ನಾಲ್ಕು ವರ್ಷದಿಂದ ನನೆಗುದಿಗೆ ಬಿದ್ದಿದೆ.

ಪಟ್ಟಣದಲ್ಲಿ ಸದ್ಯ ಒಂದು ನೀರಿನ ಟ್ಯಾಂಕ್ ಇದೆ. ಜನರಿಗೆ ಏಳು ದಿನಕ್ಕೆ ಒಮ್ಮೆ ನೀರು ಪೂರೈಕೆಯಾಗುತ್ತಿದೆ. ಜನಸಂಖ್ಯೆ ಅನುಗುಣವಾಗಿ ನೀರು ದೊರೆಯುತ್ತಿಲ್ಲ. ಜನರು ಕುಡಿಯುವನೀರಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.