ADVERTISEMENT

ರಾಯಚೂರು ನಗರದಲ್ಲಿ ನೀರಿನ ಸಮಸ್ಯೆ ಉಲ್ಭಣ

ಎಲ್ಲಿ ನೋಡಿದರೂ ಬಡಾವಣೆ ಬೀದಿಗಳಲ್ಲಿ ನೀರಿಗಾಗಿ ಪ್ಲಾಸ್ಟಿಕ್‌ ಕೊಡಗಳ ಸಾಲು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 19:30 IST
Last Updated 23 ಡಿಸೆಂಬರ್ 2018, 19:30 IST
ರಾಯಚೂರಿನ ಜವಾಹರ ನಗರದಲ್ಲಿ ಟ್ಯಾಂಕರ್‌ ನೀರಿಗಾಗಿ ಜನರು ಮುಗಿಬಿದ್ದಿರುವುದು ಭಾನುವಾರ ಕಂಡುಬಂತು
ರಾಯಚೂರಿನ ಜವಾಹರ ನಗರದಲ್ಲಿ ಟ್ಯಾಂಕರ್‌ ನೀರಿಗಾಗಿ ಜನರು ಮುಗಿಬಿದ್ದಿರುವುದು ಭಾನುವಾರ ಕಂಡುಬಂತು   

ರಾಯಚೂರು: ಶಕ್ತಿನಗರದ ಬಳಿ ಕೃಷ್ಣಾನದಿಯಿಂದ ನೀರು ಪೂರೈಕೆಯಾಗುತ್ತಿದ್ದ ಜಾಕ್ವೆಲ್‌ನಲ್ಲಿ ಪಂಪ್‌ಸೆಟ್‌ ಕೆಟ್ಟು ಹೋಗಿ ಮೂರು ದಿನಗಳಾದರೂ ದುರಸ್ತಿಯಾಗಿಲ್ಲ. ಇದರಿಂದ ರಾಯಚೂರು ನಗರದ 12 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಜನರ ತೊಂದರೆ ಅನುಭವಿಸುತ್ತಿದ್ದಾರೆ.

ವಿವಿಧ ಬಡಾವಣೆಗಳಿಗೆ ನೀರು ಪೂರೈಸಲು ನಗರಸಭೆಯಿಂದ 35 ನೀರಿನ ಟ್ಯಾಂಕರ್‌ ವ್ಯವಸ್ಥೆ ಮಾಡಲಾಗಿದೆ. ಜವಾಹರ ನಗರ, ಗಾಜಗಾರ ಪೇಟೆ ಹಾಗೂ ಹರಿಜನವಾಡದಲ್ಲಿ ಜನರು ನೀರಿಗಾಗಿ ಟ್ಯಾಂಕರ್‌ಗಳಿಗೆ ಮುಗಿ ಬೀಳುತ್ತಿರುವ ಚಿತ್ರಣ ಭಾನುವಾರ ಕಂಡುಬಂತು.

ನಗರದ 35 ವಾರ್ಡ್‌ಗಳ ಪೈಕಿ 23 ವಾರ್ಡ್‌ಗಳಿಗೆ ತುಂಗಭದ್ರಾ ನದಿ ನೀರು ಸರಬರಾಜು ವ್ಯವಸ್ಥೆ ಇದೆ. ’ಶೀಘ್ರ ದುರಸ್ತಿಗಾಗಿ ಚೆನ್ನೈನಿಂದ ತಂತ್ರಜ್ಞರು ಬಂದಿದ್ದಾರೆ. ಭಾನುವಾರ ಸಂಜೆವರೆಗೂ ದುರಸ್ತಿಯಾಗಲಿದೆ. ನೀರು ಪೂರೈಸಲು ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ’ ಎಂದು ನಗರಸಭೆ ಪೌರಾಯುಕ್ತ ರಮೇಶ ನಾಯಕ ’ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಜವಾಹರನಗರ, ಮಡ್ಡಿಪೇಟೆ, ಹರಿಜನವಾಡ ಸೇರಿದಂತೆ 12 ವಾರ್ಡ್‌ಗಳಲ್ಲಿ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ನಿತ್ಯವೂ ಮನೆಗಳಲ್ಲಿ ಹಾಗೂ ಮನೆಗಳ ಎದುರು ಸಾರ್ವಜನಿಕ ನಲ್ಲಿಗಳಿಂದ ನೀರು ಪಡೆಯುತ್ತಿದ್ದ ಜನರು ಭಾನುವಾರ ಪ್ಲಾಸ್ಟಿಕ್‌ ಕೊಡಗಳನ್ನು ಹಿಡಿದುಕೊಂಡು ಬೀದಿ ಬೀದಿಗಳಲ್ಲಿ ಸಂಚರಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಟ್ಯಾಂಕರ್‌ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಿದ್ದರೂ ಜನರು ಪೈಪೋಟಿಗೆ ಬಿದ್ದು ನೀರು ತುಂಬಿಸಿಕೊಳ್ಳುತ್ತಿರುವ ಧಾವಂತ ಎದ್ದು ಕಾಣುತ್ತಿತ್ತು.

ಬೈಕ್‌ಗಳು, ಕಾರುಗಳು ಹಾಗೂ ಸೈಕಲ್‌ಗಳಲ್ಲಿ ಪ್ಲಾಸ್ಟಿಕ್‌ ಕೊಡಗಳನ್ನು ಇಟ್ಟುಕೊಂಡು ಜನರು ತಮ್ಮ ಮನೆಗಳಿಗೆ ನೀರು ತೆಗೆದುಕೊಂಡು ಹೋಗಬೇಕಾಯಿತು. ಶುದ್ಧ ನೀರಿನ ಘಟಕಗಳ ಎದುರು ಜನಜಂಗುಳಿ ನೆರೆದಿತ್ತು. ನದಿಯಲ್ಲಿ ನೀರಿದ್ದರೂ ನಗರಸಭೆ ಅಧಿಕಾರಿಗಳು ಸರಿಯಾಗಿ ನೀರು ಬಿಡುವ ವ್ಯವಸ್ಥೆ ಮಾಡಿಲ್ಲ. ವಾರ್ಡ್‌ನಿಂದ ಆಯ್ಕೆಯಾದ ಸದಸ್ಯರು ಈ ಬಗ್ಗೆ ಜನರಿಗೆ ಅನುಕೂಲ ಮಾಡಿಕೊಡುವ ಮಾಡುತ್ತಿಲ್ಲ ಎಂದು ಜನಸಾಮಾನ್ಯರು ಶಪಿಸುತ್ತಿರುವುದು ಸಾಮಾನ್ಯವಾಗಿತ್ತು.

ತಾಂತ್ರಿಕ ತೊಂದರೆ ಏನು?

ನಗರದಲ್ಲಿ 24/7 ನಿರಂತರ ನೀರು ಪೂರೈಸಲು ಹೊಸದಾಗಿ ಪೈಪ್‌ಲೈನ್‌ ಅಳವಡಿಸಲಾಗಿದೆ. ಈ ವ್ಯವಸ್ಥೆಗೆ ಅನುಕೂಲವಾಗಲು ಕೃಷ್ಣಾನದಿ ಪಕ್ಕದ ಶಕ್ತಿನಗರ ಜಾಕ್ವೆಲ್‌ನಲ್ಲೂ ಹಳೇ ಪಂಪ್‌ಸೆಟ್‌ ಜಾಗಕ್ಕೆ ಹೊಸ ಪಂಪ್‌ಸೆಟ್‌ಗಳನ್ನು ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ. ಮೊದಲು ಕೆಲಸ ಮಾಡುತ್ತಿದ್ದ ಎರಡು ಹಳೇ ಪಂಪ್‌ಸೆಟ್‌ ಪೈಕಿ ಒಂದನ್ನು ತೆಗೆದುಹಾಕಿ, ಹೊಸದನ್ನು ಅಳವಡಿಸುವ ಕೆಲಸ ನಡೆಯುತ್ತಿತ್ತು.

ಜಾಕ್ವೆಲ್‌ನಲ್ಲಿ ಒಂದೇ ಪಂಪ್‌ಸೆಟ್‌ ಹೆಚ್ಚು ಸಮಯ ಕೆಲಸ ಮಾಡಿದ್ದರಿಂದ ಕೆಟ್ಟುಹೋಗಿದೆ. ಅದಕ್ಕೆ ಪರ್ಯಾಯವಾಗಿ ಕೆಲಸ ಮಾಡಬೇಕಿದ್ದ ಇನ್ನೊಂದು ಪಂಪ್‌ಸೆಟ್‌ ಈಗಾಗಲೇ ತೆಗೆದುಹಾಕಲಾಗಿತ್ತು. ಅದರ ಜಾಗದಲ್ಲಿ ಹೊಸ ಪಂಪ್‌ಸೆಟ್ ಇನ್ನೂ ಅಳವಡಿಸಿಲ್ಲ. ಹೀಗಾಗಿ ನೀರಿನ ಸರಬರಾಜು ನಿಂತುಹೋಗಿದೆ. ಶೀಘ್ರದಲ್ಲೆ ನೀರಿನ ಪೂರೈಕೆ ಯಥಾಸ್ಥಿತಿಯಲ್ಲಿ ಬರಲಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

‘ನೀರು ಕೊಡದಿದ್ದರೆ ಜನರಿಗೆ ಏನು ತೊಂದರೆ ಆಗುತ್ತದೆ ಎಂಬುದರ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಅರಿವಿಲ್ಲ. ಕೆಲಸಕ್ಕೆ ಹೋಗುವುದನ್ನು ಬಿಟ್ಟು ನೀರಿಗಾಗಿ ನಿಂತುಕೊಳ್ಳುವ ಪರಿಸ್ಥಿತಿ ಉದ್ಭವಿಸಿದೆ. ನೀರನ್ನು ತುಪ್ಪದಂತೆ ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಯಲ್ಲಿ ನೀರಿದ್ದರೂ ನಗರದಲ್ಲಿ ನೀರಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಟ್ಯಾಂಕರ್‌ ನೀರು ಒಂದು ಹೊತ್ತಿಗೆ ಮಾತ್ರ ಸಾಕಾಗುತ್ತದೆ’ ಎಂದು ಹರಿಜನವಾಡಾ ನಿವಾಸಿ ಮನೋಜ ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.