ADVERTISEMENT

ಮಸ್ಕಿ: ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಪುರಸಭೆ ಸನ್ನದ್ಧ

ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಪೂರೈಕೆ ಸ್ಥಗಿತ

ಪ್ರಕಾಶ ಮಸ್ಕಿ
Published 12 ಏಪ್ರಿಲ್ 2025, 6:24 IST
Last Updated 12 ಏಪ್ರಿಲ್ 2025, 6:24 IST
ಭರ್ತಿಯಾಗಿರುವ ಮಸ್ಕಿಯ ಕುಡಿಯುವ ನೀರಿನ ಕೆರೆ
ಭರ್ತಿಯಾಗಿರುವ ಮಸ್ಕಿಯ ಕುಡಿಯುವ ನೀರಿನ ಕೆರೆ   

ಮಸ್ಕಿ: ಕುಡಿಯುವ ನೀರಿಗೆ ಆಸರೆಯಾಗಿದ್ದ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಏ.10ರಿಂದ ನೀರು ಸ್ಥಗಿತಗೊಳಿಸಲಾಗಿದೆ. ಕಾಲುವೆಯಿಂದ ಕುಡಿಯುವ ನೀರಿನ ಎರಡು ಕೆರೆಗಳನ್ನು ಈಗಾಗಲೇ ಭರ್ತಿ‌ ಮಾಡಿಕೊಂಡಿರುವ ಪುರಸಭೆ ಆಡಳಿತ ಮಂಡಳಿ ಬೇಸಿಗೆಯ ಎರಡು ತಿಂಗಳು ಪಟ್ಟಣದ 23 ವಾರ್ಡ್‌ಗಳಿಗೆ ನೀರಿನ ಸಮಸ್ಯೆ ಉಂಟಾಗದಂತೆ  ಮುಂಜಾಗ್ರತಾ ಕ್ರಮ‌ ಕೈಗೊಂಡಿದೆ.

23 ವಾರ್ಡ್‌ಗಳಲ್ಲಿ ಪ್ರತಿ ವಾರ್ಡ್‌ಗೆ ಎರಡರಂತೆ ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಕೆಲವು ವಾರ್ಡ್‌ಗಳಲ್ಲಿ  ಪೈಪ್‌ಲೈನ್ ಇಲ್ಲದ ಕಡೆ ಟ್ಯಾಂಕ್ ನಿರ್ಮಿಸಿ ನೀರು ಸರಬರಾಜು ಮಾಡಲು ಪುರಸಭೆ ಯೋಜನೆ ರೂಪಿಸಿಕೊಂಡಿದೆ.

ನೀರಿನ ತೀವ್ರ ತೊಂದರೆ ಅನುಭವಿಸುತ್ತಿರುವ ಗಾಂಧಿ ನಗರದ ನಾಲ್ಕು ವಾರ್ಡ್‌ಗಳು ಸೇರಿದಂತೆ ಯಾವುದೇ ವಾರ್ಡ್‌ಗಳಲ್ಲಿ ನೀರಿನ ತೊಂದರೆಯಾಗದಂತೆ ನಿಗಾವಹಿಸಲಾಗಿದೆ. ಅಗತ್ಯ ಬಿದ್ದರೆ ಕೊಳವೆಬಾವಿ ಕೊರೆಸಲು ಸಹ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪಟ್ಟಣದ ಜನರಿಗೆ ಎಷ್ಟು ದಿನಕ್ಕೊಮ್ಮೆ ಕುಡಿಯಲು ಶುದ್ಧ ನೀರು ಕೊಡಬೇಕು ಎಂಬುದರ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು. ಕೆರೆಯಲ್ಲಿನ ನೀರಿನ ಲಭ್ಯತೆ ನೋಡಿಕೊಂಡು  ದಿನ ನಿಗದಿಪಡಿಸಲಾಗುವುದು’   ಎಂದು ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಹೇಳಿದರು.

‘ಸಾರ್ವಜನಿಕರು ಕುಡಿಯುವ ನೀರನ್ನು ಪೋಲು‌ ಮಾಡದೆ ಮಿತವಾಗಿ ಬಳಸಬೇಕು. ಈ ಬೇಸಿಗೆಯಲ್ಲಿ ಎಲ್ಲರಿಗೂ ನೀರು ದೊರಕುವಂತೆ ಸಹಕಾರ ನೀಡಬೇಕು’ ಎಂದು ಅವರು ಮನವಿ ಮಾಡಿದರು.

ಬೇಸಿಗೆ ದಿನಗಳಲ್ಲಿ‌ ಪಟ್ಟಣದ ಜನತೆಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಪುರಸಭೆಯಿಂದ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ.
ನರಸರೆಡ್ಡಿ ಮುಖ್ಯಾಧಿಕಾರಿ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.