
ಮಾನ್ವಿ: ‘ಬಡವರ ಕಲ್ಯಾಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಬಡಜನರ ಜೀವನಮಟ್ಟ ಸುಧಾರಿಸುತ್ತಿದೆ’ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಎಐಟಿಯುಸಿ ಸಂಯೋಜಿತ ಉದ್ಭವ ಆಂಜನೇಯ ಹಮಾಲರ ಸಂಘಗಳ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಎಪಿಎಂಸಿ ಹಮಾಲರಿಗೆ ನಿವೇಶನಗಳ ಹಕ್ಕುಪತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
‘73 ಅರ್ಹ ಹಮಾಲರಿಗೆ ಇಂದು ನಿವೇಶನಗಳ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ಪುರಸಭೆ ವತಿಯಿಂದ ವಿವಿಧ ಯೋಜನೆಯಡಿಯಲ್ಲಿ ಹಮಾಲರಿಗೆ ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಲಾಗುವುದು. ಹಮಾಲರ ವಸತಿ ಪ್ರದೇಶದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು’ ಎಂದು ಅವರು ಭರವಸೆ ನೀಡಿದರು.
ಶಾಸಕ ಜಿ.ಹಂಪಯ್ಯ ನಾಯಕ ಮಾತನಾಡಿದರು.
ಹಮಾಲರ ಸಂಘದ ವತಿಯಿಂದ ಸಚಿವ ಎನ್.ಎಸ್.ಬೋಸರಾಜು, ಶಾಸಕ ಜಿ.ಹಂಪಯ್ಯ ನಾಯಕ, ಎಪಿಎಂಸಿ ಆಡಳಿತಾಧಿಕಾರಿ ರವಿಚಂದ್ರ, ಕಾರ್ಯದರ್ಶಿ ರಂಗನಾಥ ದೇಸಾಯಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಯೋಪ್ರಾ ಅಧ್ಯಕ್ಷ ಅಬ್ದುಲ್ ಗಫೂರ ಸಾಬ್, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಕೆ.ಅಮರೇಶಪ್ಪ, ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಬಾಷುಮಿಯಾ, ಮುಖಂಡರಾದ ಎ.ಬಾಲಸ್ವಾಮಿ ಕೊಡ್ಲಿ, ಕೆ.ಬಸವಂತಪ್ಪ, ಶರಣಪ್ಪ ಕೆ.ಗುಡದಿನ್ನಿ ರಾಜಾ ಸುಭಾಸ್ ಚಂದ್ರ ನಾಯಕ, ಹಮಾಲರ ಸಂಘದ ಗೌರವಾಧ್ಯಕ್ಷ ಎಂ.ಬಿ.ಸಿದ್ರಾಮಯ್ಯ ಸ್ವಾಮಿ, ಅಧ್ಯಕ್ಷ ಹನುಮಂತ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.