ಸಿಂಧನೂರು: ಕಳೆದ ಎರಡು ದಿನದ ಹಿಂದೆ ಸುರಿದ ಭಾರೀ ಗಾಳಿ ಮತ್ತು ಮಳೆಯಿಂದ ತಾಲ್ಲೂಕಿನ ಹುಡಾ, ಗೊಬ್ಬರಕಲ್, ಸೋಮಲಾಪುರ ಮತ್ತು ಮುಕ್ಕುಂದಾ ಗ್ರಾಮಗಳಲ್ಲಿ ಬೆಳೆದ ದಾಳಿಂಬೆ ಬೆಳೆ ನೆಲಕ್ಕೆ ಬಿದ್ದು ಅಪಾರ ನಷ್ಟವುಂಟಾಗಿದ್ದು, ರೈತರು ತೀವ್ರ ಸಂಕಷ್ಟ ಸ್ಥಿತಿ ಅನುಭವಿಸುವಂತಾಗಿದೆ.
ಪ್ರತಿ ಎಕರೆಗೆ ಕನಿಷ್ಠ 5 ಟನ್ ದಾಳಿಂಬೆ ಬೆಳೆ ಬರುತ್ತದೆ. 1 ಟನ್‍ಗೆ ಕನಿಷ್ಠ ₹1 ಲಕ್ಷ ಆದಾಯ ಬರುತ್ತದೆ. ಸುಮಾರು 75 ಸಾವಿರ ಎಕರೆಯಲ್ಲಿ ಬೆಳೆದ ದಾಳಿಂಬೆ ಹಾನಿಯಾಗಿರುವುದರಿಂದ ಕೋಟಿಗಟ್ಟಲೇ ನಷ್ಟ ಉಂಟಾಗಿದೆ. ಇನ್ನು ಒಂದು ತಿಂಗಳಲ್ಲಿ ದಾಳಿಂಬೆ ಕೈಗೆ ಬರುತ್ತಿದೆ ಎನ್ನುವಷ್ಟರಲ್ಲಿ ಈ ಪರಿಸ್ಥಿತಿ ಎದುರಾಗಿದೆ’ ಎಂದು ಹುಡಾ ಗ್ರಾಮದ ರೈತ ಮಲ್ಲಿಕಾರ್ಜುನ ಅಳಲು ತೋಡಿಕೊಂಡರು.
ಪ್ರತಿ ಎಕರೆಗೆ ಚಾಟ್ನಿ ಮಾಡುವುದು, ಕೊಟ್ಟಿಗೆ ಗೊಬ್ಬರ, ಕ್ರಿಮಿನಾಶಕ, ಕೂಲಿ, ಬಿಸಿಲಿನಿಂದ ರಕ್ಷಣೆ ಮಾಡಲು ಹಾಕಿದ ಪರದೆ ಸೇರಿದಂತೆ ₹2.50 ಲಕ್ಷಕ್ಕೂ ಹೆಚ್ಚು ಖರ್ಚು ತಗುಲುತ್ತದೆ ಎಂದು ರೈತರು ಹೇಳುತ್ತಾರೆ.
ಗೊಬ್ಬರಕಲ್ ಗ್ರಾಮದ ಅನ್ನಪೂರ್ಣಮ್ಮ ಮತ್ತು ಸರ್ವಮಂಗಳಮ್ಮ ಅವರು ತಲಾ 3 ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆಸಿದ್ದಾರೆ. ಭಾನುವಾರ ರಾತ್ರಿ ಏಕಾಏಕಿ ಸುರಿದ ಮಳೆ ಮತ್ತು ಗಾಳಿಗೆ ದಾಳಿಂಬೆ ಗಿಡಗಳು ಮುರಿದ್ದು ಬಿದ್ದಿವೆ. ಹಣ್ಣುಗಳು ಉದುರಿವೆ. ಸಂಪೂರ್ಣ ಹಣ್ಣಾಗದೆ ಮಾರಾಟ ಮಾಡಲು ಬರುವುದಿಲ್ಲ. ಇದರಿಂದ ಎರಡೂ ಕುಟುಂಬಗಳು ಆರ್ಥಿಕ ನಷ್ಟದಿಂದ ಕಂಗಾಲಾಗಿವೆ.
ಗೊಬ್ಬರಕಲ್ ಗ್ರಾಮದ ಶಿವಲಿಂಗಯ್ಯ, ಮಲ್ಲಯ್ಯ, ಮುತ್ತನಗೌಡ ಹುಡಾ, ಹನುಮಂತರೆಡ್ಡಿ ಹುಡಾ, ದೇವೇಂದ್ರಪ್ಪ ಮಾಸ್ತರ ಹೀಗೆ ಹಲವಾರು ರೈತರು ದಾಳಿಂಬೆ ಬೆಳೆ ಬೆಳೆದಿದ್ದು, ಮಳೆ-ಗಾಳಿಯ ಪರಿಣಾಮವಾಗಿ ಈಗ ಕಷ್ಟ ಅನುಭವಿಸುವಂತಾಗಿದ್ದು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರ ಆಸರೆಯಾಗಬೇಕು ಎಂದು ನೊಂದ ರೈತರು ಮನವಿ ಮಾಡಿದ್ದಾರೆ.
18 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆ ಹಾನಿ
ಈಗಾಗಲೇ ಅದರ ವಿವರಗಳನ್ನು ಜಿಲ್ಲಾ ಉಪನಿರ್ದೇಶಕರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಚಂದ್ರಶೇಖರ ಕುರಿ ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ನಾನು 5 ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆದಿದ್ದೇನೆ. ಸುಮಾರು ₹12 ಲಕ್ಷ ಖರ್ಚಾಗಿದೆ. ಮಳೆ ಮತ್ತು ಗಾಳಿಯಿಂದ ಬೆಳೆದ ದಾಳಿಂಬೆ ನೆಲಕ್ಕುರುಳಿ ಬಿದ್ದಿದೆ. ಆದ್ದರಿಂದ ರಾಜ್ಯ ಸರ್ಕಾರ ನ್ಯಾಯಯುತವಾಗಿ ಎಕರೆಗೆ ₹2.50 ದಂತೆ ಪರಿಹಾರ ನೀಡಿ ನೆರವಾಗಬೇಕುರಾಮನಗೌಡ ರೈತ ಹುಡಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.