ADVERTISEMENT

ಆರ್ಥಿಕ ಸಬಲೀಕರಣದತ್ತ ಆಸಕ್ತಿ ವಹಿಸಿ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 13:09 IST
Last Updated 8 ಮಾರ್ಚ್ 2020, 13:09 IST
ರಾಯಚೂರಿನ ರಂರಮಂದಿರದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ರಾಷ್ಟ್ರೀಯ ಪೋಷಣ ಪಕ್ವಾಡ ಅಭಿಯಾನ ಕಾರ್ಯಕ್ರಮದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿದರು.
ರಾಯಚೂರಿನ ರಂರಮಂದಿರದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ರಾಷ್ಟ್ರೀಯ ಪೋಷಣ ಪಕ್ವಾಡ ಅಭಿಯಾನ ಕಾರ್ಯಕ್ರಮದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿದರು.   

ರಾಯಚೂರು: ಮಹಿಳೆಯರು ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡೆದುಕೊಂಡು ಸಮಾಜಕ್ಕೆ ಮಾದರಿಯಾಗಿ ಕೆಲಸ ಮಾಡಬೇಕು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಪೋಷಣ ಅಭಿಯಾನ– ಪೋಷಣ ಪಕ್ವಾಡ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಧುನಿಕ ಯುಗದಲ್ಲಿ ಮಹಿಳೆಯರು ಎಲ್ಲಾ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದು ಶ್ಲಾಘನೀಯ. ಹೆಣ್ಣು, ಗಂಡು, ಹಿಂದು–ಮುಸ್ಲಿಂ, ಕ್ರಿಶ್ಚಿಯನ್ ಅಂತ ಯಾರು ಹೇಳಿ ಹುಟ್ಟಿರಲಿಲ್ಲ, ಇದು ದೇವರ ಸೃಷ್ಠಿ. ಹೀಗಾಗಿ ಮೇಲು ಕೀಳು ಹಾಗೂ ಲಿಂಗ ತಾರತಮ್ಯ ಮಾಡಬಾರದು. ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಬೇಕಿದೆ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಮಟ್ಟದಿಂದಲೂ ಮಹಿಳೆಯರಿಗೆ ರಾಜಕೀಯ ಮಿಸಲಾತಿ ಕಲ್ಪಿಸಲಾಗಿದೆ. ಆದರೆ, ಮಹಿಳೆಯರಿಗೆ ಇದುವರೆಗೆ ಸ್ವತಂತ್ರ್ಯವಾಗಿ ಕೆಲಸ ಮಾಡಲು ಬಿಡದೇ ಕುಟುಂಬ ಸದಸ್ಯರ (ಪುರುಷರ) ಹಸ್ತಕ್ಷೇಪ ನಡೆಯುತ್ತಿದೆ ಇದು ಸರಿಯಲ್ಲ. ಮಹಿಳೆಯರಿಗೆ ಸ್ವತಂತ್ರ್ಯವಾಗಿ ಕೆಲಸ ಮಾಡಲು ಬಿಟ್ಟರೆ ಯಶಸ್ವಿಯಾಗಲು ಸ್ವಾ ಸಾಮರ್ಥ್ಯ ಬೆಳೆಯಲಿದೆ ಎಂದರು.

ಕೇಂದ್ರ ಸರ್ಕಾರ ಜನೌಷಧಿ, ಪೋಷಣ ಅಭಿಯಾನದಂತಹ ಹಲವಾರು ಯೋಜನೆಗಳು ಜಾರಿಗೆ ತರುವ ಮೂಲಕ ಬಡ, ಜನ ಸಾಮಾನ್ಯರ ಕಲ್ಯಾಣಕ್ಕೆ ಶ್ರಮಿಸುತ್ತಿದೆ.ಜಿಲ್ಲೆಯ ಹಿಂದುಳಿದ ತಾಲ್ಲೂಕು ಎಂದು ಹಣೆ ಪಟ್ಟಿ ಕಟ್ಟಿಕೊಂಡಿರುವ ದೇವದುರ್ಗದಲ್ಲಿ ಮಕ್ಕಳ ಅಪೌಷ್ಟಿಕತೆ ಕಾಡುತ್ತಿದ್ದು ಸರ್ಕಾರದ ಯೋಜನೆ ಸಮರ್ಪಕವಾಗಿ ತಲುಪಿಸುವ ಕಾರ್ಯ ಮಾಡಬೇಕು. ಆರೋಗ್ಯವಂತ ಮಕ್ಕಳಿಂದ ಸಧೃಡ ಸಮಾಜ ನಿರ್ಮಾಣ ಎಂದು ತಿಳಿಸಿದರು.

ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಹೆಣ್ಣಿಗೆ ವಿಶೇಷ ಸ್ಥಾನ, ಗೌರವ ನೀಡಲಾಗಿದೆ. ಸಮಾಜದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದುದು. ಶಿಕ್ಷಣ, ರಾಜಕೀಯ, ಆರ್ಥಿಕ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಮಹಿಳೆಯರು ವಿಶೇಷ ಸಾಧನೆ ಮಾಡಿ ಮಾದರಿಯಾಗಿದ್ದಾರೆ. ಆದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಂದಿಗೂ ಲಿಂಗ ತಾರತಮ್ಯ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಪ್ರೌಢ ಶಿಕ್ಷಣ ಹಂತಕ್ಕೆ ಸೀಮಿತಗೊಳಿಸಲಾಗುತ್ತಿದ್ದು ವಿಷಾಧನೀಯ. ಮಹಿಳೆಯರಿಗೆ ಶಿಕ್ಷಣ ಸಂಸ್ಕಾರ ನೀಡಿದಾಗ ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

ಮಹಿಳೆಯರಿಗೆ ಶೇ 33 ರಷ್ಟು ರಾಜಕೀಯ ಮೀಸಲಾತಿ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಸಿಗಬಹುದು. ಇದರಿಂದ ಮಹಿಳೆಯರ ಅರ್ಥಿಕ, ರಾಜಕೀಯ ಸ್ಥಿತಿ ಸುಧಾರಣೆಯಾಗಿ ಮತ್ತಷ್ಟು ಅಭಿವೃದ್ಧಿಯಾಗಲು ಸಹಕಾರಿಯಾಗಲಿದೆ. ಮಹಿಳೆಯರು ಅಧಿಕಾರದಲ್ಲಿದ್ದಾಗ ಮಹಿಳೆಯರ, ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಅವರು ಮಾತನಾಡಿ, ’ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ. ಮನೆ ಬೆಳಗುವ ಮಹಾಲಕ್ಷ್ಮೀ ಹೆಣ್ಣು ಮಗಳು ಎಂದು ಹೊಗಳುತ್ತಾರೆ. ಆದರೆ, ಇಂದಿಗೂ ಹೆಣ್ಣು ಭ್ರೂಣ ಹತ್ಯೆ, ದೌರ್ಜನ್ಯ ಮುಂದುವರೆದಿದ್ದು ಖಂಡನಾರ್ಹ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು. ಮೊಬೈಲ್ ಗೀಳಿನಿಂದ ಹೊರ ಬಂದು ಸ್ವ ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಪಾಲಕರೂ ಸಹ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಮಹಿಳೆಯರ ಸಬಲೀಕರಣಕ್ಕೆ ಪುರುಷರ ಸಹಕಾರವೂ ಅಗತ್ಯವಾಗಿದ್ದು, ಮಹಿಳೆಯರ ಪರ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಜಯಶ್ರೀ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವೀರನಗೌಡ, ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಸ್ಮಿತಾ ಅಕ್ಕ, ಕೃಷಿ ವಿಶ್ವವಿದ್ಯಾಲಯದ ಐಸಿಎಆರ್ ಅಧಿಕಾರಿ ಜಿ.ಎಸ್. ಯಡಹಳ್ಳಿ, ಅನುಪಮಾ, ಮಹಿಳಾ ಒಕ್ಕೂಟದ ತಾಲ್ಲೂಕು ಅಧ್ಯಕ್ಷೆ ಈರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.