ADVERTISEMENT

ಗ್ರಾಮೀಣ ಜನರಿಗೆ ಯೋಜನೆ ತಲುಪಿಸಿ: ಎಡಿಸಿ ಡಾ.ಕೆ.ಆರ್.ದುರುಗೇಶ್

ಗ್ರಾಮ ಒನ್ ಕೇಂದ್ರದ ಪ್ರಾಂಚೈಸಿಗಳಿಗೆ ಒಂದು ದಿನದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 13:22 IST
Last Updated 30 ಸೆಪ್ಟೆಂಬರ್ 2022, 13:22 IST
ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್‌.ದುರುಗೇಶ ಅವರ ಅಧ್ಯಕ್ಷತೆಯಲ್ಲಿ  ಗ್ರಾಮ ಒನ್ ಯೋಜನೆಯ ಎರಡನೇ ಹಂತದಲ್ಲಿ ಆಯ್ಕೆಯಾದ ಗ್ರಾಮ ಒನ್ ಕೇಂದ್ರದ ಅಭ್ಯರ್ಥಿಗಳಿಗೆ ಕಾರ್ಯಾಗಾರ ನಡೆಯಿತು.
ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್‌.ದುರುಗೇಶ ಅವರ ಅಧ್ಯಕ್ಷತೆಯಲ್ಲಿ  ಗ್ರಾಮ ಒನ್ ಯೋಜನೆಯ ಎರಡನೇ ಹಂತದಲ್ಲಿ ಆಯ್ಕೆಯಾದ ಗ್ರಾಮ ಒನ್ ಕೇಂದ್ರದ ಅಭ್ಯರ್ಥಿಗಳಿಗೆ ಕಾರ್ಯಾಗಾರ ನಡೆಯಿತು.   

ರಾಯಚೂರು: ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಗ್ರಾಮ ಒನ್ ಕೇಂದ್ರದ ಪ್ರಾಂಚೈಸಿಗಳು ನಿಸ್ವಾರ್ಥ ಮನೋಭಾವನೆಯಿಂದ ಸೇವೆ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ರಾಮ ಒನ್ ಯೋಜನೆಯ ಎರಡನೇ ಹಂತದಲ್ಲಿ ಆಯ್ಕೆಯಾದ ಗ್ರಾಮ ಒನ್ ಕೇಂದ್ರದ ಅಭ್ಯರ್ಥಿಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮ ಒನ್ ಯೋಜನೆಯು ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು ಗ್ರಾಮದಲ್ಲಿ ಒಂದೇ ಸೂರಿನಡಿ ವಿವಿಧ ಇಲಾಖೆಗಳ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಓದಗಿಸಲು ಜಾರಿಗೆ ತರಲಾಗಿದೆ. ಇದರಿಂದ ಗ್ರಾಮಗಳಲ್ಲಿ ವಾಸಿಸುವ ಜನರು ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವುದು ತಪ್ಪಿದಂತಾಗುತ್ತದೆ ಎಂದು ಹೇಳಿದರು.

ADVERTISEMENT

ಗ್ರಾಮ ಒನ್ ಕೇಂದ್ರದ ಪಂಚಾಯಿತಿಗಳು ನಿಸ್ವಾರ್ಥ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಜನರಿಗೆ ಮನಮುಟ್ಟುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಜನರಲ್ಲಿ ಹೆಚ್ಚಿನ ಮಟ್ಟದಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಕೇಂದ್ರದಲ್ಲಿ ನಿಯಮಾನುಸಾರವಾಗಿ ಸೂಚಿಸಿದ ಸಾಧನಗಳನ್ನು ಅಳವಡಿಸುವುದು ಕಡ್ಡಾಯ.ಒಂದು ವೇಳೆ ಮಾಡಿಸದಿದ್ದಲ್ಲಿ ಅಂಥವರ ಐ.ಡಿ ಯನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದರು.

ಅಭ್ಯರ್ಥಿಗಳಿಗೆ ಐ.ಡಿ ದೊರಕಿದ ತಕ್ಷಣ ಅಭ್ಯರ್ಥಿಗಳಿಗೂ ಪ್ರತಿ ದಿನವೊಂದಕ್ಕೆ ಕನಿಷ್ಠ 25ರಿಂದ 30ಸೇವಾ ಸಿಂಧು ಅರ್ಜಿಗಳು ಹಾಗೂ ಕನಿಷ್ಠ 50ಕ್ಕಿಂತ ಹೆಚ್ಚು ಆಯುಷ್ಮಾನ್ ಭಾರತ್ ಹಾಗೂ ಇನ್ನುಳಿದ ಕರ್ನಾಟಕ ಸರಕಾರದ ವಿವಿಧ ಇಲಾಖೆಗಳ ವಿವಿಧ ಸೇವೆಗಳ ಅರ್ಜಿಗಳ ವಹಿವಾಟು ಮಾಡಲೇಬೇಕು. ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಅಥವಾ ಕಡಿಮೆ ಶುಲ್ಕ ಪಡೆದುಕೊಳ್ಳಬಾರದು ಎಂದು ಹೇಳಿದರು.

ಪ್ರಮುಖವಾಗಿ ತಮಗೆ ದೊರಕಿದ ಗ್ರಾಮ ಒನ್ ಐ.ಡಿಯನ್ನು ಯಾರಿಗೂ ಶೇರ್ ಮಾಡಬಾರದು. ಒಂದು ವೇಳೆ ಈ ರೀತಿ ಮಾಡಿದ್ದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಕಾಲಕಾಲಕ್ಕೆ ಬದಲಾಗುವ ಸರ್ಕಾರದ ನಿರ್ದೇಶನಗಳನ್ನು ಹಾಗೂ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಯೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.