ADVERTISEMENT

ಪ್ರವಾಸೋದ್ಯಮದಿಂದ ಕಲೆ, ಸಂಸ್ಕೃತಿ ಪೋಷಣೆ

ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಎಡಿಸಿ ಡಾ.ಕೆ.ಆರ್‌.ದುರುಗೇಶ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 15:51 IST
Last Updated 27 ಸೆಪ್ಟೆಂಬರ್ 2022, 15:51 IST
ರಾಯಚೂರು ಕೇಂದ್ರ ಬಸ್‌ ನಿಲ್ದಾಣ ಪಕ್ಕದ ಐತಿಹಾಸಿಕ ಕೋಟೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2022ರ ಕಾರ್ಯಕ್ರಮದಲ್ಲಿ ಯುವಕ, ಯುವತಿಯರು ಪಾಲ್ಗೊಂಡಿದ್ದರು.
ರಾಯಚೂರು ಕೇಂದ್ರ ಬಸ್‌ ನಿಲ್ದಾಣ ಪಕ್ಕದ ಐತಿಹಾಸಿಕ ಕೋಟೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2022ರ ಕಾರ್ಯಕ್ರಮದಲ್ಲಿ ಯುವಕ, ಯುವತಿಯರು ಪಾಲ್ಗೊಂಡಿದ್ದರು.   

ರಾಯಚೂರು: ಪ್ರವಾಸೋದ್ಯಮವು ದೇಶದ ಪ್ರಗತಿಗೆ ಮತ್ತು ಆರ್ಥಿಕತೆಗೆ ಬಹಳ ದೊಡ್ಡ ಕೊಡುಗೆ ನೀಡುವುದರೊಂದಿಗೆ, ಪ್ರವಾಸಿಗರ ಮತ್ತು ಸ್ಥಳೀಯರ ನಡುವೆ ಸ್ಥಳೀಯ ಕಲೆ ಮತ್ತು ಸಂಸ್ಕೃತಿ ಪೋಷಿಸುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಹೇಳಿದರು.

ನಗರದ ಕೇಂದ್ರ ಬಸ್‌ ನಿಲ್ದಾಣ ಪಕ್ಕದ ಐತಿಹಾಸಿಕ ಕೋಟೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಪ್ರಾಚ್ಯ & ಪುರತತ್ವ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ, ಗೃಹ ರಕ್ಷಕದಳ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನೆಹರು ಯುವ ಕೇಂದ್ರ, ಯುವ ಸಬಲೀಕರಣ & ಕ್ರೀಡಾ ಇಲಾಖೆ, ಗ್ರಂಥಾಲಯ ಇಲಾಖೆ, ಭಾರತ ಸೇವಾದಳ, ರೆಡ್ ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ, ಮಹಿಳಾ ಪ್ರಥಮ ದರ್ಜೆ ಕಾಲೇಜು, ಕೋಟೆ ಸಂರಕ್ಷಣಾ ಸಮಿತಿ ಹಾಗೂ ನಗರಸಭೆ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2022ರ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಯುವಕರು ಮೊದಲು ಜಿಲ್ಲೆಯ ಇತಿಹಾಸವನ್ನು ತಿಳಿಯಬೇಕು. ಆನಂತರ ವಿಶ್ವದ ಇತಿಹಾಸವನ್ನು ಹರಿಯುವ ಕೆಲಸವಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಾಗಿ ಇತಿಹಾಸದಿಂದನೇ ಪ್ರಶ್ನೆಗಳು ಕೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಇತಿಹಾಸದ ಅಧ್ಯಾಯವನ್ನು ಹೆಚ್ಚಾಗಿ ಮಾಡಿ ಐತಿಹಾಸಿಕ ಸ್ಥಳಗಳನ್ನು ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.

ADVERTISEMENT

ನಗರಸಭೆಯ ಅಧ್ಯಕ್ಷೆ ಲಲಿತಾ ಕಡಗೋಲ ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಪರೋಕ್ಷವಾಗಿ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಇದರಿಂದ ಮಧ್ಯಮ ವರ್ಗದ ಆದಾಯವು ಹೆಚ್ಚಲಿದೆ ಎಂದರು.

ನಗರಸಭೆಯ ಹಿರಿಯ ಸದಸ್ಯ ಜಯಣ್ಣ ಮಾತನಾಡಿ, ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಇನ್ನಷ್ಟು ಆಕರ್ಷಣೀಯ ಮತ್ತು ಮೂಲ ಸೌಲಭ್ಯ ಕಲ್ಪಿಸುವುದರ ಜೊತೆಗೆ ಉತ್ತಮ ಪರಿಸರ ಹಾಗೂ ಸ್ವಚ್ಛತೆ ಬಗ್ಗೆ ವಿಶೇಷ ಆದ್ಯತೆ ನೀಡುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಮೆಹಬೂಬ್ ಜೀಲಾನಿ ಮಾತನಾಡಿ, ಈ ಬಾರಿ ಪ್ರವಾಸೋದ್ಯಮ ಘೋಷ ವಾಕ್ಯ ಪ್ರವಾಸೋದ್ಯಮದ ಪುನರಾವಲೋಕನ ಎಂಬುದಾಗಿದ್ದು, ಸ್ಥಳೀಯ ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಜಾಥಕ್ಕೆ ಚಾಲನೆ: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಶಾಸಕ ಬಸನಗೌಡ ದದ್ದಲ್ ಅವರು ಕಾಲ್ನಡಿಗೆ ಜಾಥಾಗೆ ಹಸಿರು ನಿಶಾನೆ ತೋರಿಸಿದರು.

ಜಿಲ್ಲಾ ವಾಣಿಜ್ಯೋದ್ಯಮ ಇಲಾಖೆಯ ಉಪ ನಿರ್ದೇಶಕ ಬಸವರಾಜ, ಜಿಲ್ಲಾ ಯೋಜನಾ ನಿರ್ದೇಶಕ ಆಶಪ್ಪ, ಜಿಲ್ಲಾ ಗ್ರಂಥಾಲಯ ಅಧಿಕಾರಿ ಮಂಜುಳಾ ಎಸ್.ಹೊಸೂರ, ಗೃಹ ರಕ್ಷಕ ದಳದ ಕಮಾಂಡರ್ ಹಫೀಜುಲ್ಲಾ, ರೆಡ್ ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಅತವುಲ್ಲಾ, ಪ್ರಾಚಾರ್ಯ ಡಾ.ಯಂಕಣ್ಣ, ಡಾ.ಶ್ರೀನಿವಾಸ, ಸಾಹಿತ್ಯ ವೀರ ಹನುಮಾನ್, ರೆಡ್ ಕ್ರಾಸ್ ಜಿಲ್ಲಾ ಶಿಕ್ಷಣ ಸಂಯೋಜಕ ಡಾ.ದಂಡಪ್ಪ ಬಿರಾದಾರ, ವಿದ್ಯಾ ಸಾಗರ್ ಸೇರಿದಂತೆ ಪ್ರವಾಸೋದ್ಯಮ ಇಲಾಖೆಯ ಪ್ರಥಮ ದರ್ಜೆ ಸಹಾಯಕಿ ಕವಿತಾ, ಸಿಬ್ಬಂದಿ ಹನುಮಂತ, ಮಂಜುಳಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.