ರಾಯಚೂರು: ‘ಹಿಂದುಳಿದ ವರ್ಗದವರ ಏಳಿಗೆಗೆ ಕಾಳಜಿ ವಹಿಸಿ ರಾಜ್ಯದಲ್ಲಿ ಮಹತ್ವದ ಬದಲಾವಣೆಗೆ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ವಿಚಾರಧಾರೆಗಳನ್ನು ಯುವಪೀಳಿಗೆ ಅರಿತುಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಯಚೂರು ಮಹಾನಗರ ಪಾಲಿಕೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಉಳುವವನೇ ಭೂಮಿ ಒಡೆಯ ಕಾರ್ಯಕ್ರಮದ ಜಾರಿ ತಂದು ಭೂಮಿಯನ್ನು ಉಳುವವರನ್ನೇ ಆ ಹೊಲದ ಒಡೆಯರನ್ನಾಗಿ ಮಾಡಿದರು. ಅರಸು ಜಾರಿ ಮಾಡಿದ ಭೂಸುಧಾರಣೆ ಕಾರ್ಯಕ್ರಮದಿಂದಾಗಿ ಇಂದು ಅಸಂಖ್ಯೆ ರೈತರ ಬಾಳಲ್ಲಿ ಹೊಸ ಆಶಾಕಿರಣ ಮೂಡಿದೆ’ ಎಂದು ಹೇಳಿದರು.
‘ಅನೇಕ ಕ್ರಾಂತಿಕಾರ್ಯ ಯೋಜನೆ ರೂಪಿಸಿ ಕಡು ಬಡವರ, ಹಿಂದುಳಿದ ವರ್ಗಗಳ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಅರಸು ಅವರ ಜಯಂತಿ ಹಿನ್ನೆಲೆಯಲ್ಲಿ, ಅವರ ಮಾದರಿಯ ಆಡಳಿತದ ಕ್ರಮಗಳನ್ನು ಅನುಸರಿಸಬೇಕಿದೆ’ ಎಂದು ಹೇಳಿದರು.
ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಕೆ.ವೆಂಕಟೇಶ ಮಾತನಾಡಿ, ‘ಮಲ ಹೊರುವ ಪದ್ದತಿ ನಿಲ್ಲಿಸಿ ಜೀತಪದ್ದತಿಗೆ ಮಂಗಳ ಹಾಡಿದರು. ಭೂಸುಧಾರಣೆ ಯೋಜನೆ ಇಡೀ ಜಗತ್ತಿನಲ್ಲಿ ಹೆಸರಾಯಿತು. ಅದಕ್ಕಾಗಿ ನಾವು ಅರಸು ಅವರನ್ನು ಸಾಮಾಜಿಕ ನ್ಯಾಯ ಹರಿಕಾರರೆಂದು ಕರೆಯುತ್ತೇವೆ’ ಎಂದು ಹೇಳಿದರು.
ಅರಸು ಅವರ 110ನೇ ಜನ್ಮ ದಿನಾಚರಣೆಯ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರ ದವರೆಗೆ ಅರಸು ಅವರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯ ಹಾಗೂ ವಸತಿ ಶಾಲೆಗಳ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಮಹಾನಗರ ಪಾಲಿಕೆಯ ಅಧ್ಯಕ್ಷ ನರಸಮ್ಮ ಮಾಡಗಿರಿ ಎರಡನೇ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುನೀತಾ ಕಾಂಬಳೆ ಹಿಂದುಳಿದ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಾಂತಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.