
ರಾಯಚೂರು: ‘ಯುವಕವಿಗಳು ಯಾವ ಪಂಥದಲ್ಲೂ ಗುರುತಿಸಿಕೊಳ್ಳದೆ ಸಮಾಜದ ಒಳಿತಿಗಾಗಿ ಕವಿತೆಗಳನ್ನು ರಚಿಸಬೇಕು’ ಎಂದು ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ತಾಯರಾಜ್ ಮರ್ಚಟಾಳ್ ಸಲಹೆ ನೀಡಿದರು.
ಇಲ್ಲಿನ ಮಹಿಳಾ ಸಮಾಜದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಯುವ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
‘ಇತ್ತೀಚಿಗೆ ಯುವಕರಲ್ಲಿ ಸಾಹಿತ್ಯದ ಹವ್ಯಾಸ ಕಡಿಮೆಯಾಗುತ್ತಿದೆ. ಯುವ ಸಮೂಹ ಓದುವ ಹವ್ಯಾಸವನ್ನು ರೂಢಿಸಿಕೊಂಡರೆ ಜ್ಞಾನ ವೃದ್ಧಿಸಿಕೊಳ್ಳಬಹುದು. ಜತೆಗೆ ನಿತ್ಯ ಪತ್ರಿಕೆಗಳನ್ನು ಓದುವುದರಿಂದ ಪ್ರಚಲಿತ ವಿದ್ಯಮಾನ ತಿಳಿಯಬಹುದು. ಇದರಿಂದ ಕವಿಗಳು ಆಗುಹೋಗುಗಳನ್ನು ಕವಿತೆ ಮೂಲಕ ಸಾದರ ಪಡಿಸಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
‘ಕವಿತೆಗೆ ತನ್ನದೇ ಅದ ಶೈಲಿ ಇದೆ. ಕವಿ ಬಿಟ್ಟು ಕಾವ್ಯ ಇಲ್ಲ, ಕಾವ್ಯ ಬಿಟ್ಟು ಕವಿ ಇಲ್ಲ. ವರ್ತಮಾನದಲ್ಲಿನ ವಿಚಾರಗಳ ಬಗ್ಗೆ ಯುವಕರು ತಿಳಿದುಕೊಂಡು ಅಧ್ಯಯನ ಮಾಡಬೇಕು. ಯುವಕರು ಈ ದೇಶದ ಆಸ್ತಿ, ಮನಸ್ಸು ಮಾಡಿದರೆ ದೇಶ ಹಾಗೂ ಸಮಾಜವನ್ನು ಅಭಿವೃದ್ಧಿ ಮಾಡಬಹುದು’ ಎಂದರು.
ಹಿರಿಯ ಸಾಹಿತಿ ಚನ್ನಬಸವ ಹಿರೇಮಠ ಮಾತನಾಡಿ, ‘ಸುಮಾರು 40 ವರ್ಷಗಳ ಹಿಂದೆ ಧಾರವಾಡ ಪರಿಸರದಲ್ಲಿ ಒಂದು ಮಾತು ಚಲಾವಣೆಯಲ್ಲಿತ್ತು. ಅದು ನಮ್ಮ ಕವಿಗಳ ಶೈಕ್ಷಣಿಕ ಬೆಳವಣಿಗೆ ಯಾವ ಹಂತಕ್ಕೆ ಹೋಗಿದೆ ಎಂಬುದನ್ನು ಕಣ್ಮುಂದೆ ತರುತ್ತದೆ. ತುಳಿತಕ್ಕೆ ಒಳಗಾದವರು ಶೈಕ್ಷಣಿಕ, ಆರ್ಥಿಕವಾಗಿ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು.
‘ಯುವಕರಿಗೆ ಬಹಳಷ್ಟು ಅವಕಾಶವಿದ್ದು, ಕಣ್ಣ ಮುಂದೆ ನಡೆಯುವ, ನಮ್ಮ ನೆಲದ ವಿಷಯಗಳನ್ನು ತಿಳಿಸಬೇಕು. ಕವಿತೆಗಳು ಮನಸುಗಳನ್ನು ರಂಜಿಸುವ ಕವಿತೆ ಆಗಬಾರದು. ಜೊತೆಗೆ ಹೃದಯಕ್ಕೆ ಆಪ್ತವಾಗಿ ಬರೆಯಬಾರದು. ಸಮಾಜವನ್ನು ಸರಿ ದಾರಿಗೆ ತರುವಂಥ ಕವಿತೆಗಳನ್ನು ಯುವಕರು ಬರೆಯಬೇಕು’ ಎಂದು ಕಿವಿಮಾತು ಹೇಳಿದರು
ಆಕಾಶವಾಣಿ ಮುಖ್ಯಸ್ಥ ವೆಂಕಟೇಶ ಬೇವಿನಬೆಂಚಿ ಅಧ್ಯಕ್ಷತೆ ವಹಿಸಿದ್ದರು.
ಗ್ರೇಡ್-2 ತಹಶೀಲ್ದಾರ್ ಪರಶುರಾಮ, ವಾರ್ತಾ ಇಲಾಖೆಯ ಗವಿಸಿದ್ದಪ್ಪ ಹೊಸಮನಿ, ಕನ್ನಡ ಸಾಹಿತ್ಯ ಪರಿಷತ್ತಿನ ಲಿಂಗಸುಗೂರು ತಾಲ್ಲೂಕು ಘಟಕದ ಅಧ್ಯಕ್ಷ ಮಹದೇವಪ್ಪ ನಾಗರಾಳ, ಕನ್ನಡ ಸಾಹಿತ್ಯ ಪರಿಷತ್ತು ಮಾನ್ವಿ ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸವ ನೀರಮಾನ್ವಿ, ಕಥೆಗಾರ ಕಲಿಗಣನಾಥ ಗುಡದೂರ, ಕವಿಗಳಾದ ಶಿವರಾಜ ಬೆಟ್ಟದೂರ ಹಾಗೂ ಯುವ ಕವಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.