
ರಾಯಚೂರು: ‘ಸಾರ್ವಜನಿಕರ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆ ಜಾರಿಗೊಳಿಸಿದೆ. ಕಂದಾಯ ಇಲಾಖೆ ಅಧಿಕಾರಿಗಳು ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ಒತ್ತು ನೀಡಬೇಕು’ ಎಂದು ಕಲಬುರಗಿ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಸೂಚಿಸಿದರು.
ಇಲ್ಲಿಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
‘ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು ಸಾರ್ವಜನಿಕರ ದಾಖಲೆಗಳನ್ನು ಸಂರಕ್ಷಿಸುವಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ನಿರ್ದೇಶನ ನೀಡಿದರು.
‘ದಾಖಲೆಗಳ ಡಿಜಿಟಲೀಕರಣದಿಂದ ಕುಳಿತಲ್ಲೇ ಬೆರಳ ತುದಿಯಲ್ಲಿ ಸಾರ್ವಜನಿಕರ ಆಕಾರ ಬಂದಿ, ಮ್ಯುಟೇಶನ್, ಪಹಣಿ ಸೇರಿದಂತೆ ಎಲ್ಲವನ್ನೂ ಪಡೆಯಲು ಸಾಧ್ಯವಾಗಲಿದೆ. ಆದ್ದರಿಂದ ಅಧಿಕಾರಿಗಳು ಕಾಳಜಿಯಿಂದ ಕೆಲಸ ಮಾಡಬೇಕು’ ಎಂದರು.
‘ಮಹತ್ವದ ದಾಖಲೆಗಳ ಸಂಗ್ರಹಗಾರದಲ್ಲಿ ಬೇಕಾ ಬಿಟ್ಟಿಯಾಗಿ ಅನುಪಯುಕ್ತ ಮತ್ತು ಅನಗತ್ಯ ವಸ್ತುಗಳನ್ನು ಇಡಬಾರದು. ಇದರಿಂದ ಆ ವಸ್ತುಗಳು ತುಕ್ಕು ಹಿಡಿದು ದಾಖಲೆಗಳು ಹಾಳಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ದಾಖಲೆಗಳನ್ನು ಸಂಗ್ರಹಿಸಿಡಲಾದ ಕೊಠಡಿಯಲ್ಲಿನ ಅನುಪಯುಕ್ತ ವಸ್ತುಗಳನ್ನು ತೆರವುಗೊ ಳಿಸಬೇಕು. ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಹಾಗೂ ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕು’ ಎಂದು ನಿರ್ದೇಶನ ನೀಡಿದರು.
‘ಜನರ ದಾಖಲೆಗಳ ಸಂರಕ್ಷಣೆ ಪ್ರತಿಯೊಬ್ಬ ಅಧಿಕಾರಿಯ ಹೊಣೆಯಾಗಿದೆ. ಸಿಬ್ಬಂದಿ ಮೇಲೂ ಸರಿಯಾಗಿ ನಿಗಾ ಇಟ್ಟು ಕೆಲಸಗಳನ್ನು ಮಾಡಿಸಬೇಕು’ ಎಂದು ತಿಳಿಸಿದರು.
‘ಸರ್ಕಾರದಿಂದ ಯಾವ ಯಾವ ದಾಖಲೆಗಳಿಗೆ ಯಾವ ಯಾವ ಬಣ್ಣ ಬಳಸಬೇಕು ಎನ್ನುವ ಪಟ್ಟಿ ಸಿದ್ಧಪಡಿಸಲಾಗಿದೆ. ಅದರ ಅನ್ವಯ ಅಧಿಕಾರಿಗಳು ಪಟ್ಟಿಗಳನ್ನು ರಚಿಸಿಕೊಂಡು ದಾಖಲೀಕರಣ ಮಾಡಬೇಕು’ ಎಂದು ಹೇಳಿದರು.
‘ಜಿಲ್ಲಾಧಿಕಾರಿ ನ್ಯಾಯಾಲಯದ 68 ಪ್ರಕರಣಗಳ ಪೈಕಿ 61 ಬಾಕಿ ಇವೆ. ರಾಯಚೂರು ತಹಶೀಲ್ದಾರ್ ಅವರ ವ್ಯಾಪ್ತಿಯಲ್ಲಿ 77, ಲಿಂಗಸುಗೂರು ವ್ಯಾಪ್ತಿಯಲ್ಲಿ 53 ಸೇರಿದಂತೆ ವಿವಿಧ ತಾಲ್ಲೂಕು ವ್ಯಾಪ್ತಿಯಲ್ಲಿ ಬಾಕಿಯಿರುವ ವಿವಿಧ ಪ್ರಕರಣಗಳಿವೆ. ಇವುಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಬೇಕು’ ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ನಿತೀಶ್ ಮಾತನಾಡಿ,‘90 ದಿನಗಳೊಳಗಿನ 109 ಪ್ರಕರಣಗಳಿವೆ. 60 ದಿನಗಳೊಳಗಿನ 219 ಪ್ರಕರಣಗಳು ಬಾಕಿ ಇವೆ. 30 ದಿನಗಳೊಳಗಿನ 118 ಪ್ರಕರಣ 90 ದಿನಗಳ ಮೇಲ್ಪಟ್ಟು 18 ಪ್ರಕರಣಗಳು ಬಾಕಿ ಉಳಿದುಕೊಂಡಿವೆ. ಶೀಘ್ರವೇ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಬಾಕಿ ಇರುವ ಪ್ರಕರಣಗಳ ವಿಚಾರಣೆ ಮಾಡಿ ಆದೇಶಿಸಲಾಗಿದೆ. ಆದರೆ, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಕಾರಣ ಅವು ಮತ್ತೆ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ರಿಮೈಂಡರ್ ಆಗಿ ಬರುತ್ತವೆ. ಆದ್ದರಿಂದ ಅವುಗಳ ದಾಖಲಾದ ದಿನಾಂಕದಿಂದ ಬಾಕಿ ಇವೆ’ ಎಂದರು.
ವಿವಿಧ ತಾಲ್ಲೂಕುಗಳ ತಹಶೀಲ್ದಾರ್‌ಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಭೂಮಾಪನ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.