
ರಾಮನಗರ: ರಾಮದೇವರ ಬೆಟ್ಟ ತಪ್ಪಲಿನ ಇರುಳಿಗರ ಕಾಲೊನಿಯಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಮೂವರು ಅಂಗವಿಕಲರ ಗುಡಿಸಲುಗಳೂ ಭಸ್ಮವಾಗಿವೆ. ಈಗ ಈ ಅಂಗವಿಕಲ ಕುಟುಂಬದವರಿಗೆ ಪಕ್ಕದಲ್ಲೇ ಇರುವ ಸರ್ಕಾರಿ ಶಾಲಾ ಕಟ್ಟಡವೇ ಆಶ್ರಯ ತಾಣವಾಗಿದೆ.
ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಸಿ.ರಾಜಣ್ಣ ಅರ್ಜಿ ನೀಡಿದರೆ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರಾದರೂ ಯಾವುದೇ ತಾತ್ಕಾಲಿಕ ಆಶ್ರಯ ಇಲ್ಲದಂತಾಗಿದೆ.
ಮಾಸಾಶನ ಮರೀಚಿಕೆ: ಗಿರಿಜಮ್ಮ, ಶ್ರೀಕಾಂತ ಮತ್ತು ಸುಮಾ ಎಂಬ ಹೆಸರಿನ ಈ ಮೂವರೂ ಅಂಗವಿಕಲರು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆ ಸೌಲಭ್ಯ ವಂಚಿತರೂ ಆಗಿದ್ದಾರೆ. ಹೀಗಾಗಿ ಇವರ ಪಾಲಿಗೆ ಅಂಗವಿಕಲರ ಮಾಸಾಶನ ಸೌಲಭ್ಯ ಇನ್ನೂ ಮರೀಚಿಕೆ ಆಗಿಯೇ ಉಳಿದಿದೆ. ಇವರೆಲ್ಲಾ ಕೂಲಿ ಕೆಲಸವನ್ನೇ ಆಶ್ರಯಿಸಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಬಾಲ್ಯದಲ್ಲೇ ಪೋಲಿಯೊದಿಂದ ಅಂಗವಿಕಲರಾದ ಈ ಮೂವರೂ ಮಾಸಾಶನಕ್ಕಾಗಿ 4 ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಿದ್ದಾರಾದರೂ ಇವರ ಕಡತಗಳಿಗೆ ಈತನಕ ಮುಕ್ತಿ ಸಿಕ್ಕಿಲ್ಲ.
ಗಣತಿಯಲ್ಲೂ ಗಮನಿಸಿಲ್ಲ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಜನಗಣತಿ, ಆರ್ಥಿಕ ಗಣತಿಯಂತಹ ಸಂದರ್ಭದಲ್ಲಿಯೂ ಈ ಅಂಗವಿಕಲರನ್ನು ಗುರುತಿಸಿಲ್ಲ. ಈ ಅಂಗವಿಕಲರಿಗೆ ಏಕೆ ಮಾಸಾಶನ ಮಂಜೂರಾಗಿಲ್ಲ ಎಂದು ಸ್ಥಳೀಯ ಹರೀಸಂದ್ರ ಗ್ರಾಮಪಂಚಾಯಿತಿ ಅಧಿಕಾರಿಗಳನ್ನು ವಿಚಾರಿಸಿದರೆ, ’ಅವರಿಂದ ಅರ್ಜಿಯೇ ಸಲ್ಲಿಕೆಯಾಗಿಲ್ಲ. ಹಾಗಾಗಿ ಸವಲತ್ತು ಸಿಕ್ಕಿಲ್ಲ’ ಎಂಬ ಪ್ರತಿಕ್ರಿಯೆ ದೊರೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.