ADVERTISEMENT

`ಅನ್ಯ ಉದ್ದೇಶಕ್ಕೆ ಕೆರೆ ಭೂಮಿ ಬಳಸದಿರಿ'

ಕನಕಪುರ ಪೇಟೆ ಕೆರೆ ಪ್ರಕರಣ - ಹೈಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 23 ಜೂನ್ 2013, 8:13 IST
Last Updated 23 ಜೂನ್ 2013, 8:13 IST

ಕನಕಪುರ:  `ಪೇಟೆ ಕೆರೆಯ 20 ಎಕರೆ ಭೂಮಿಯನ್ನು ಕೆರೆಯಾಗಿ ಅಭಿವೃದ್ಧಿ ಪಡಿಸಬೇಕು. ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಕ್ಕೆ ಬಳಸಬಾರದು ಎಂದು ಉಚ್ಚನ್ಯಾಯಾಲಯ ಆದೇಶಿಸಿದೆ' ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ್‌ಸ್ವಾಮಿ ತಿಳಿಸಿದರು.

ಪಟ್ಟಣದ ಅಡ್ಡಹಳ್ಳದ ಪಕ್ಕದಲ್ಲಿರುವ ರೈತ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಹಾಗೂ ಸಂಘದ ಮುಂದಿನ ಹೋರಾಟದ ರೂಪುರೇಷೆ ರೂಪಿಸುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಟ್ಟಣದ 505 ಸರ್ವೇ ನಂಬರಿನ ಪೇಟೆ ಕೆರೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ, ತೋಟಗಾರಿಕೆ ಇಲಾಖೆ ಜಾಗವನ್ನು ಸೇರಿಸಿಕೊಂಡಂತೆ ಕೆರೆಯನ್ನು ಮುಚ್ಚಿ ಅನ್ಯ ಉದ್ದೇಶಕ್ಕೆ ಬಳಕೆ ಮಾಡಲು ಕೆಲ ಪ್ರಭಾವಿ ವ್ಯಕ್ತಿಗಳು ಮುಂದಾಗಿದ್ದರು. ರಾಜ್ಯ ರೈತ ಸಂಘದ ಸಂಪತ್ ಕುಮಾರ್ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕೆರೆ ಉಳಿಸುವಂತೆ ಮನವಿ ಮಾಡಿದ್ದರು ಎಂದರು.

ಅರ್ಜಿ ಮತ್ತು ವಾದವನ್ನು ಮಾನ್ಯ ಮಾಡಿರುವ ನ್ಯಾಯಾಲಯ 36 ಎಕರೆ 26 ಗುಂಟೆ ಜಮೀನಿನಲ್ಲಿ ಈ ಹಿಂದೆ ತೋಟಗಾರಿಕೆ ಇಲಾಖೆ, ಎ.ಪಿ.ಎಂ.ಸಿ. ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ನ್ಯಾಯಾಧೀಶರ ವಸತಿ ಗೃಹ, ಕಾನೂನು ಇಲಾಖೆಗೆ  ನೀಡಿರುವ 16 ಎಕರೆ 29 ಗುಂಟೆ ಜಮೀನಿನನ್ನು ಬಿಟ್ಟು ಉಳಿದಂತಹ 20 ಎಕರೆ ಭೂಮಿಯನ್ನು ಕೆರೆಯಾಗಿಯೇ ಅಭಿವೃದ್ಧಿ ಪಡಿಸಬೇಕು. ಈ ಆಜ್ಞೆಗೆ ಯಾರಿಂದಲೂ ಚ್ಯುತಿ ಬಾರದಂತೆ ನೋಡಿಕೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿ ಆದೇಶಿಸಿದೆ ಎಂದರು.

ಕೆರೆ ಉಳಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಜಯಕರ್ನಾಟಕ ಸಂಘಟನೆಯ ಮಾಜಿ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಕೆರೆಕಟ್ಟೆಗಳು ಪ್ರಭಾವಿಗಳ ಪಲಾಗುತ್ತಿವೆ. ಪೇಟೆ ಕೆರೆಯನ್ನು ಮುಚ್ಚಲು ಮುಂದಾದಾಗ ನಡೆಸಿದ ಹೋರಾಟಕ್ಕೆ ಸಾಕಷ್ಟು ಒತ್ತಡ ಮತ್ತು ಬೆದರಿಕೆಗಳು ಬಂದವು. ಅದಕ್ಕೆ ಅಂಜದೆ ಹೋರಾಟ ನಡೆಸಲಾಯಿತು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‌ಕುಮಾರ್ ಮತ್ತು ವರ್ತಕರ ಸಂಘದ ಅಧ್ಯಕ್ಷ ಗೋವಿಂದಪ್ಪ ಮಾತನಾಡಿ, ಪೇಟೆ ಕೆರೆಯನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಯಾರ ಸಹಾಯವನ್ನು ಪಡೆಯದೆ ಸ್ವಂತ ಹಣದಿಂದ ಹೋರಾಟ ಮಾಡಲಾಯಿತು. ಆದರೆ ಕೆಲವು ವಿರೋಧಿಗಳು ರಾಜಕೀಯ ಬಣ್ಣ ಬೆರಸಿ ಅಪಪ್ರಚಾರ ಮಾಡಿದರು. ಹೋರಾಟಗಾರರು ಇಂತಹ ಅಪಾದನೆಗಳಿಗೆ ಕಿವಿಗೊಡದೆ ಹೋರಾಟದಲ್ಲಿ ಮುಂದುವರೆಯಬೇಕು ಎಂದು ಹೇಳಿದರು.

ನ್ಯಾಯಾಲಯವು ಸ್ಪಷ್ಟ ಆದೇಶ ನೀಡಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರೂ ತಾಲ್ಲೂಕು ಆಡಳಿತ ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತಾಳಿದೆ. ಮತ್ತೊಮ್ಮೆ ತಹಶೀಲ್ದಾರ್ ಅವರಿಗೆ ನ್ಯಾಯಾಲದ ಆದೇಶದ ಪ್ರತಿಯನ್ನು ನೀಡಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಬೇಕೆಂದು ಸಭೆ ತೀರ್ಮಾನಿಸಿ ತಹಶೀಲ್ದಾರ್ ದಾಕ್ಷಾಯಿಣಿ ಅವರಿಗೆ ಮನವಿ ಪತ್ರ ನೀಡಿದರು.

ಮನವಿಯನ್ನು ಸ್ವೀಕರಿಸಿದ ದಾಕ್ಷಾಯಿಣಿ ಅವರು ಮಾತನಾಡಿ, ನ್ಯಾಯಾಲಯದ ಆದೇಶದ ಪ್ರತಿ ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೇ ಕಚೇರಿಗೆ ಬಂದಿದ್ದು ಅದರನ್ವಯ ಪುರಸಭೆಗೆ ಕೆರೆಯಂಗಳದ ಸ್ವಚ್ಛತೆ ಕಾಪಾಡುವಂತೆ ಸೂಚನೆನೀಡಲಾಗಿದೆ. ಸರ್ವೇ ಇಲಾಖೆಗೆ ಸರ್ವೇ ಕಾರ್ಯ ಮಾಡುವಂತೆ ತಿಳಿಸಲಾಗಿದ್ದು, ಸೋಮವಾರದಿಂದ ಪೊಲೀಸರ ರಕ್ಷಣೆಯಲ್ಲಿ ಸರ್ವೇ ಕಾರ್ಯ ನಡೆಲಿದೆ. ನ್ಯಾಯಾಲದ ಆದೇಶವನ್ನು ಪರಿಪಾಲನೆ ಮಾಡುತ್ತಿರುವುದಾಗಿ ತಿಳಿಸಿದರು.

ಜಿಲ್ಲಾ ಕಾರ್ಯದರ್ಶಿ ಭೈರಲಿಂಗೇಗೌಡ, ತಾಲ್ಲೂಕು ಅಧ್ಯಕ್ಷ ಅನಂತರಾಂಪ್ರಸಾದ್, ಮಾಜಿ ಅಧ್ಯಕ್ಷ ಪುರದಯ್ಯ, ನಾರಾಯಣಸ್ವಾಮಿ, ಗಜೇಂದ್ರಸಿಂಗ್, ಶ್ರೀನಿವಾಸ್, ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.