ADVERTISEMENT

ಅರಿವಿನ ಕೊರತೆಯಿಂದ ಅಪಘಾತಗಳ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಕನಕಪುರ: ವಾಹನ ಚಾಲನೆಯ ಬಗ್ಗೆ ಸರಿಯಾದ ಅರಿವಿಲ್ಲದಿರುವುದರಿಂದ ಇಂದು ಪ್ರತಿನಿತ್ಯ ನೂರಾರು ಅಪಘಾತ ಸಂಭವಿಸುತ್ತಿವೆ. ಅವುಗಳನ್ನು ತಡೆಯಲು ಚಾಲಕರು, ವಾಹನ ಚಾಲನೆಯ ನೀತಿ-ನಿಯಮಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಬೇಕೆಂದು ಶಿವಗಿರಿ ಕ್ಷೇತ್ರದ ಅನ್ನದಾನೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಸೇರುಗಾರರ ಬೀದಿಯಲ್ಲಿ ಡಿ.ಕೆ.ಎಸ್. ವಾಹನ ಚಾಲನ ತರಬೇತಿ ಶಾಲೆ ಪ್ರಾರಂಭೋತ್ಸವ ಹಾಗು ಹೊಸವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಪ್ರತಿಯೊಬ್ಬ ನಾಗರಿಕರು ಕಾನೂನು ಪರಿಪಾಲನೆಯ ಬಗ್ಗೆ ಹೆಚ್ಚಿನ ಅರಿವು ಹೊಂದಿರಬೇಕು. ಅಪಘಾತಗಳನ್ನು ತಡೆಯಲು ತಪ್ಪದೇ ತರಬೇತಿ ಹೊಂದಬೇಕೆಂದು ತಿಳಿಸಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ.ಗಿರಿಧರ್ ಮಾತನಾಡಿ,  ಇಂದು ಶೇಕಡ 90 ರಷ್ಟು ವಾಹನ ಚಾಲಕರು ರಸ್ತೆ ನಿಯಮ ಪಾಲಿಸದಿರುವುದರಿಂದಲೇ ಅಪಘಾತಗಳು ಹೆಚ್ಚಾಗುತ್ತಿವೆ ಎಂದರು.

ಹಿರಿಯ ವಾಹನ ತನಿಖಾ ಅಧಿಕಾರಿ ಗುರುಮೂರ್ತಿ, ಕನ್ನಡಪರ ಹೋರಾಟಗಾರ ರಾಮಚಂದ್ರ ಮಾತನಾಡಿದರು. ಕಾಂಗ್ರೆಸ್ ಮುಖಂಡ ಡಿ.ಕೆ.ಸುರೇಶ್ ತರಬೇತಿ ಶಾಲೆ ಉದ್ಘಾಟಿಸಿದರು.

ಪುರಸಭೆ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾ ಈಶ್ವರ್, ಮುಖಂಡರುಗಳಾದ ಎಸ್.ಬೋರೇಗೌಡ, ವೀರಭದ್ರಯ್ಯ, ಪ್ರಾಂಶುಪಾಲ ಎಂ.ವಿ. ವೆಂಕಟೇಶ್ ಸೇರಿದಂತೆ ಅನೇಕರು ಹಾಜರಿದ್ದರು. ಕಲಾವಿದ ಚಂದ್ರಾಜ್, ಏರಂಗೆರೆ ಶಿವರಾಮ್, ಜನಪದ ಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.