ADVERTISEMENT

ಅಲ್ಲಲ್ಲಿ ಪ್ರವಾಹ ಪರಿಸ್ಥಿತಿ: ಬೆಳೆಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 9:14 IST
Last Updated 16 ಅಕ್ಟೋಬರ್ 2017, 9:14 IST

ರಾಮನಗರ: ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ವರುಣ ಆರ್ಭಟಿಸಿದ್ದು, ಅಲ್ಲಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಕಣ್ವ ಹೊಳೆಯಲ್ಲಿ ನೀರಿನ ಪ್ರವಾಹ ಹೆಚ್ಚಾದ ಪರಿಣಾಮ ಕೂಟಗಲ್‌–ಯರೇಹಳ್ಳಿ ನಡುವೆ ಇರುವ ಚೆಕ್‌ ಡ್ಯಾಮ್‌ ಒಡೆದು ನೀರು ಮುನ್ನುಗ್ಗಿದೆ. ಇಲ್ಲಿ ವರ್ಷದ ಹಿಂದಷ್ಟೇ ಕಿರು ಅಣೆಕಟ್ಟೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದಾಗಿ ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ಸ್ಥಳೀಯರು ದೂರಿದರು.

ಸಾಕಷ್ಟು ಕಡೆ ಮಳೆ ನೀರು ಜಮೀನಿಗೆ ನುಗ್ಗಿದ್ದು, ಬೆಳೆಗಳು ಜಲಾವೃತಗೊಂಡಿವೆ. ನೂರಾರು ಎಕರೆ ಪ್ರದೇಶದಲ್ಲಿನ ರಾಗಿ, ಜೋಳ, ನೆಲಗಡಲೆ ಮೊದಲಾದ ಬೆಳೆಗಳು ನೀರಿನಲ್ಲಿ ನಿಂತಿವೆ. ಮಳೆ ಮುಂದುವರಿದಲ್ಲಿ ಬೆಳೆಗಳು ಕೊಳೆಯುವ ಸಾಧ್ಯತೆ ಹೆಚ್ಚಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಬೆಂಗಳೂರಿನಲ್ಲಿ ಭಾರಿ ಮಳೆಯಾದ ಪರಿಣಾಮ ವೃಷಭಾವತಿ ನದಿಯಲ್ಲಿನ ನೀರಿನ ಪ್ರವಾಹವು ಹೆಚ್ಚಿದೆ. ಬೈರಮಂಗಲ ಜಲಾಶಯದಿಂದ ನೀರು ಭಾರಿ ಪ್ರಮಾಣದಲ್ಲಿ ಹೊರ ಹೋಗುತ್ತಿದೆ.

ADVERTISEMENT

ವೃಷಭಾವತಿ ನದಿಯಲ್ಲಿಯೂ ಪ್ರವಾಹ ಪರಿಸ್ಥಿತಿ ಇದ್ದು, ಕೆಲವು ಕಡೆ ನೆಲಮಟ್ಟದ ಸೇತುವೆಗಳ ಮೇಲೆ ನೀರು ಹರಿಯತೊಡಗಿದೆ. ಸಾಕಷ್ಟು ಕೆರೆಗಳು ತುಂಬಿ ಹರಿಯತೊಡಗಿವೆ.

ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ 47 ಮಿಲಿಮೀಟರ್‌ನಷ್ಟು ಸರಾಸರಿ ಮಳೆಯಾಗಿದೆ. ಚನ್ನಪಟ್ಟಣ ತಾಲ್ಲೂಕಿನಲ್ಲಿ 42 ಮಿ.ಮೀ, ಕನಕಪುರ 58 ಮಿ.ಮೀ, ಮಾಗಡಿ 40 ಮಿ.ಮೀ ಹಾಗೂ ರಾಮನಗರದಲ್ಲಿ 34 ಮಿಲಿಮೀಟರ್‌ನಷ್ಟು ಸರಾಸರಿ ಮಳೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.